ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸುಂದರ್ ರಾಜ್, ಡಿ.ವಿ.ಪರಶಿವಮೂರ್ತಿ, ಎನ್. ಸರ್ದಾರ್ ಸಚ್ಚಿದಾನಂದ ಮೂರ್ತಿ, ಪ್ರೊ.ಮುರುಳಿ, ಎಚ್.ಎನ್.ಪ್ರೇಮ್ ಕುಮಾರ್, ಸುಧಾ ಮೃತ್ಯುಂಜಯಪ್ಪ ಅವರಿಗೆ ‘ಬಸವ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಶ್ರೀ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ, ಡಾ.ಡಿ.ತಿಮ್ಮಯ್ಯ, ಡಾ.ಕೆ.ಬಿ.ಲಿಂಗರಾಜು, ಡಾ.ಹೆಳವರ ಹುಂಡಿ ಸಿದ್ದಪ್ಪ, ಮಡ್ಡೀಕೆರೆ ಗೋಪಾಲ್, ಮೂಗೂರು ನಂಜುಂಡಸ್ವಾಮಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿಕೆ
ಪ್ರಶಸ್ತಿ ಪ್ರದಾನ ಸಮಾರಂಭ
ಬಸವಣ್ಣ ತತ್ವವನ್ನು ಎಲ್ಲರೂ ಪಾಲಿಸಿದರೆ ಮಾತ್ರ ಇಡೀ ದೇಶ ಜಾತ್ಯತೀತವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ನಗರದ ಹೊಸಮಠದ ನಟರಾಜ ಸಭಾ ಭವನದಲ್ಲಿ ಮೈಸೂರು ಶರಣ ಮಂಡಲಿಯಿಂದ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ‘ಬಸವರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಬಸವಣ್ಣ ಅವರ ತತ್ವಗಳನ್ನು ಎಲ್ಲರಿಗೂ ವಿಸ್ತರಿಸುವ ಕೆಲಸವಾಗಬೇಕು ಎಂದರು.
ಬಸವಣ್ಣ ಎಲ್ಲರಿಗೂ ಲಿಂಗಧಾರಣೆ ಮಾಡುವ ಮೂಲಕ ಅಂತರ್ಜಾತಿ ವಿವಾಹಕ್ಕೆ ಒತ್ತು ಕೊಟ್ಟರು. ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ’ ಎಂಬ ಅವರ ವಚನ ಎಷ್ಟು ಅರ್ಥಗರ್ಭಿತವಾಗಿದೆ. ಇದನ್ನು ಯಾವ ಧರ್ಮದಲ್ಲೂ ಯಾರೂ ಹೇಳಲಿಲ್ಲ. ನಾವು ಬಸವಣ್ಣ ಅವರನ್ನು ನೆನೆದರೆ ಸಾಲದು, ಅವರನ್ನು ಅನುಸರಿಸಬೇಕು ಎಂದರು.
ಬಸವಣ್ಣ ಅವರು ದೇಶದಲ್ಲಿ ಮಹಾಪುರುಷನಾಗಿ ಜನಿಸಿ ಜಗತ್ತಿಗೆ ದಿವ್ಯಜ್ಯೋತಿಯಾದರು. ಅವರು ಬಾಲ್ಯದಲ್ಲಿಯೇ ಸಮಾಜದ ಕೆಟ್ಟ ಸಂಪ್ರದಾಯಗಳನ್ನು ವಿರೋಧಿಸಿ, ಸಮಾಜ ಸುಧಾರಣೆಗೆ ಮುಂದಾದರು. ಕಾಯಕ ಮತ್ತು ದಾಸೋಹ ಸಂದೇಶ ಸಾರಿದರು. ವೈಚಾರಿಕತೆ ಬಗ್ಗೆ ಅರಿವು ಮೂಡಿಸಿದರು. ಎಲ್ಲ ತುಳಿತ ಸಮುದಾಯದವರನ್ನು ಒಗ್ಗೂಡಿಸಿ ಸಮಾಜದ ಒಳಿತಿಗೆ ಅನುಭವ ಮಂಟಪ ಸ್ಥಾಪಿಸಿದರು ಎಂದರು.
ಅವರು 12ನೇ ಶತಮಾನದಲ್ಲಿಯೇ ಸ್ತ್ರೀಯರಿಗೆ ಸಮಾನತೆ ನೀಡಿದರು. ಇಂದು ಅದೇ ಹಾದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ತ್ರೀಯರಿಗೆ ಸ್ತ್ರೀ ಶಕ್ತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿ ನಾನಾ ಯೋಜನೆಗಳನ್ನು ಜಾರಿ ಮಾಡುವ ಮೂಲಕ ನೆರವಾಗಿದ್ದಾರೆ. ಹಾಗಾಗಿ, ನಮ್ಮ ಮಹಿಳೆಯರು ಬಸವಣ್ಣ ಅವರ ಜತೆಗೆ ಸಿದ್ದರಾಮಯ್ಯ ಅವರನ್ನು ನೆನೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಿಸಿಪಿ ಸುಂದರ್‌ರಾಜ್, ಹಂಪಿ ಕನ್ನಡ ವಿವಿ ಕುಲಪತಿ ಡಿ.ವಿ.ಪರಶಿವಮೂರ್ತಿ, ಡಿ.ಎ.ವಿ.ಶಾಲೆಯ ಎನ್.ಸರ್ದಾರ್ ಸಚ್ಚಿದಾನಂದಮೂರ್ತಿ, ಎಂ.ಐ.ಟಿ. ವಿದ್ಯಾಸಂಸ್ಥೆಯ ಪ್ರೊ.ಮುರಳಿ, ಸಮಾಜ ಸೇವಕರಾದ ಎಚ್.ಎನ್.ಪ್ರೇಮ್‌ಕುಮಾರ್, ಸುಧಾ ಮೃತ್ಯುಂಜಯಪ್ಪ ಅವರಿಗೆ ‘ಬಸವ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೂರ್ಯಸಿಂಹಾಸನ ಮಠಾಧ್ಯಕ್ಷ ಡಾ.ಶ್ರೀ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹೆಳವರ ಹುಂಡಿ ಸಿದ್ದಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಮೈಸೂರು ಶರಣ ಮಂಡಳಿಯ ಗೌರವಾಧ್ಯಕ್ಷ ಯು.ಎಸ್. ಕುಮಾರ್, ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಕಾರ್ಯಾಧ್ಯಕ್ಷ ಎ.ಸಿ. ಜಗದೀಶ್, ಪ್ರಧಾನ ಸಂಚಾಲಕ ಎಂ.ಚಂದ್ರಶೇಖರ್ ಇತರರು ಇದ್ದರು.