ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಕುರಿತು ಏನು ಮಾತುಕತೆ ಆಗಿದೆ ಎಂಬುದು ನನಗೇನೂ ಗೊತ್ತಿಲ್ಲ. ಈ ಬಗ್ಗೆ ಹೈ ಕಮಾಂಡ್ ಸ್ಪಷ್ಟನೆ ನೀಡಬೇಕು ಎಂದು ಶಾಸಕ ತನ್ವೀರ್ ಸೇಠ್ ಹೇಳಿದು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸೂತ್ರ ನಮಗೆ ಗೊತ್ತಿಲ್ಲ. ನಮ್ಮದು ಸುಭದ್ರ ಸರ್ಕಾರವಾಗಿದ್ದು, ನಾನು ಯಾವ ಬಣದಲ್ಲೂ ಇಲ್ಲ. ನಾನು ಕಾಂಗ್ರೆಸ್ ಬಣ. ಯಾರು ಯಾರ ಪರ ಹೋಗುತ್ತಿಲ್ಲ. ನಮ್ಮದೇ ನೂರೆಂಟಿದೆ, ನಾವು ನಾಯಕರ ಪೂಜೆ, ಆರಾಧನೆ ಮಾಡಲ್ಲ ಎಂದರು.
ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ್ದಾರೆ. ‘ನಾನು ಆರಾಧಿಸುವ ದೈವವೇ ಸರಿ’ ಅನ್ನೋದು ಸರಿ ಅಲ್ಲ. ಡಿ.ಕೆ. ಶಿವಕುಮಾರ್ ಋಣ ನನ್ನ ಮೇಲೆ ಇದ್ದೇ ಇದೆ. ನನ್ನ ತಂದೆ ಮೃತಪಟ್ಟ ಸಂದರ್ಭದಲ್ಲಿ ಉಪ ಚುನಾವಣೆ ಎದುರಾಯಿತು. ಆ ಸಂದರ್ಭ ಡಿ.ಕೆ. ಶಿವಕುಮಾರ್ ನನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದರು, ನಾನು ಅದನ್ನು ಮರೆಯೋದಿಲ್ಲ ಎಂದರು.
ನಾನು ಪಕ್ಷೇತರವಾಗಿ ನಗರ ಪಾಲಿಕೆಗೆ ಆಯ್ಕೆಯಾಗಿದ್ದೆ. ಆ ಸಮಯದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ಇದ್ದರು. ನನ್ನನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು. ಆದರೆ ನಾನು ಮೇಯರ್ ಆಗಲಿಲ್ಲ, ಅದು ಬೇರೆ ವಿಚಾರ. ಸಿದ್ದರಾಮಯ್ಯ ಋಣ ಕೂಡ ನನ್ನ ಮೇಲಿದೆ. ನಾನು ಯಾರ ಬಣ ಹಾಗೂ ನಾಯಕರ ಪರ ಇಲ್ಲ. ನನ್ನದು ಕಾಂಗ್ರೆಸ್ ಬಣ, ಕಾಂಗ್ರೆಸ್ ಸಿದ್ಧಾಂತ. ಪಕ್ಷದ ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ನಾಯಕತ್ವ ಬದಲಾವಣೆ ಏನೇ ಆದರೂ ನಾವು ಹೈಕಮಾಂಡ್ ನಿಲುವಿಗೆ ಬದ್ಧ ಎಂದು ಹೇಳಿದರು.
ಸಚಿವ ಸಂಪುಟ ಮರು ರಚನೆ ಆದರೆ ನನಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇದೆ. ಹೈ ಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನನ್ನ ಬೆಂಬಲ ಇದೆ. ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದರೂ ನಾನು ಬೆಂಬಲಿಸುತ್ತೇನೆ. ಅಧಿಕಾರ ಕೊಟ್ಟವರ ಪರ ನಾನು ನಿಲ್ಲಲ್ಲ. ಪಕ್ಷದ ಪರ ನಾನು ನಿಲ್ಲುತ್ತೇನೆ ಎಂದು ಹೇಳಿದರು.
ಸಚಿವ ಸ್ಥಾನದ ಪಡೆಯಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ನನ್ನ ನಾಯಕರನ್ನು ಭೇಟಿಯಾಗುವ ಸಂದರ್ಭ ಬಂದರೆ ಭೇಟಿ ಆಗುತ್ತೇನೆ. ನಾನು ಧರ್ಮ ಭಿಕ್ಷೆ ಕೇಳಲ್ಲ. ಪಕ್ಷ ಯುದ್ಧಕ್ಕೆ ನಿಲ್ಲು ಅಂದರೆ ನಿಲ್ಲುತ್ತೇನೆ, ಕುರ್ಚಿ ಕೊಟ್ಟು ಅಧಿಕಾರ ಮಾಡು ಅಂದರೂ ಮಾಡುತ್ತೇನೆ ಎಂದರು.