ಮೈಸೂರು: ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ಅದೇ ಸಮುದಾಯಕ್ಕೆ ಸೇರಿದ ನನಗೆ ಸಚಿವ ಸ್ಥಾನ ಕೇಳುವುದು ಸರಿಯಲ್ಲ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಚಾಮುಂಡಿಬೆಟ್ಟಕ್ಕೆ ಶುಕ್ರವಾರ ಆಗಮಿಸಿ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದರಿಂದ ನಾನೇ ಸಿಎಂ ಆದಷ್ಟು ಖುಷಿಯಾಗಿದೆ. ಸಮುದಾಯದ ಹಿತದೃಷ್ಟಿಯಿಂದ ಸಚಿವ ಸ್ಥಾನ ಕೇಳುವುದು ಸರಿಯಲ್ಲ ಎಂದರು.
ಕಾಂಗ್ರೆಸ್‌ಅನ್ನು ತಿಗಣೆಗಳಿಗೆ ಹೋಲಿಸಿದ ಮಾಜಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಅವರು, ಒಂದು ತಿಗಣೆ ಕಚ್ಚಿದರೂ ನಿದ್ದೆ ಮಾಡಲು ಆಗುವುದಿಲ್ಲ ಎಂಬುದನ್ನು ಬಿಜೆಪಿಯವರು ಅರ್ಥಮಾಡಿಕೊಳ್ಳಬೇಕು. ಬಿಜೆಪಿಯವರು ತಿಗಣೆ, ಜಿರಲೆ ಎನ್ನುವುದನ್ನು ಬಿಡಬೇಕು ಎಂದು ಹೇಳಿದರು.
ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಸ್ವಯಂ ಪ್ರೇರಿತರಾಗಿ ಯುವಜನರು ಬಂದಿದ್ದರು. ಯಾರು ಕೂಡ ಅವರಿಗೆ ಹಣ ಕೊಟ್ಟು ಕರೆಸಿರಲಿಲ್ಲ. ಕೇವಲ ಒಂದು ವಾಟ್ಸ್ ಆ್ಯಪ್ ಸಂದೇಶಕ್ಕೆ ಅಷ್ಟೊಂದು ಜನರು ಬಂದಿದ್ದರು. ಅವರ ಭಾವನೆಗಳನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ನೀಟ್ ಹಗರಣ ಮತ್ತು ಕೆಪಿಎಸ್‌ಸಿ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಒದ್ದು ಒಳಗೆ ಹಾಕಬೇಕು ಎಂದು ಒತ್ತಾಯಿಸಿದರು.
ನಾನು ಆಕಾಂಕ್ಷಿಯಲ್ಲ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಚಾಮುಂಡಿಬೆಟ್ಟಕ್ಕೆ ಶುಕ್ರವಾರ ಆಗಮಿಸಿ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವೇಳೆ ಯುವ ಶಾಸಕರಿಗೆ ಅವಕಾಶ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿರುವುದು ಸ್ವಾಗತಾರ್ಹ. ನಾನು ಮೊದಲ ಬಾರಿ ಶಾಸಕನಾಗಿದ್ದೇನೆ. ಹೀಗಾಗಿ ಸಚಿವ ಸ್ಥಾನವನ್ನು ಬಯಸಿಲ್ಲ ಎಂದರು.