ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಕೋರ್ಟ್ ಆದೇಶ
ಕೋರ್ಟ್ ಆದೇಶ
Published on

ಪ್ರಮುಖ ಮುಖ್ಯಾಂಶಗಳು

  • ಮದುವೆಯಾದ ಆರಂಭದಿಂದಲೂ ಹೆಂಡತಿಗೆ ಕಿರುಕುಳ, ಮಾನಸಿಕ, ದೈಹಿಕ ಹಿಂಸೆ
  • ಮಲಗಿದ್ದ ಪ್ರೇಮಾಳ ಕುತ್ತಿಗೆಗೆ ಟವಲ್ ಸುತ್ತಿ ಬಿಗಿದು ಕೊಲೆ
  • ಜೀವಾವಧಿ ಶಿಕ್ಷೆಯೊಂದಿಗೆ ಒಂದು ಲಕ್ಷ ರೂ. ದಂಡ
ಮೈಸೂರು: ಹೆಂಡತಿಯನ್ನು ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಕುಮಾರ್ ಎಂಬಾತನೇ ಕೊಲೆ ಅಪರಾಧಿ. 18 ವರ್ಷಗಳ ಹಿಂದೆ ಇದೇ ಗ್ರಾಮದ ಪ್ರೇಮಾ ಅವರನ್ನು ವಿವಾಹವಾಗಿದ್ದ. 
ಮದುವೆಯಾದ ಆರಂಭದಿಂದಲೂ ಹೆಂಡತಿಗೆ ಕಿರುಕುಳ, ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದ. 2023ರ ನವೆಂಬರ್ 11ರಂದು ಮದುವೆ ಕಾರ್ಯಕ್ಕೆ ಹೋಗಿ ಬಂದ ಕಾರಣಕ್ಕೆ ಹೆಂಡತಿಯೊಂದಿಗೆ ಈತ ಜಗಳ ತೆಗೆದಿದ್ದ. 
ಮಲಗಿದ್ದ ಪ್ರೇಮಾಳ ಕುತ್ತಿಗೆಗೆ ಟವಲ್ ಸುತ್ತಿ ಬಿಗಿದು ಕೊಲೆ ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪಿರಿಯಾಪಟ್ಟಣ ಠಾಣೆಯ ಪೊಲೀಸರು ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.
ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್.ರೂಪಾ ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾಗಿರುವ ಕಾರಣಕ್ಕೆ ಕುಮಾರ್‌ನಿಗೆ ಜೀವಾವಧಿ ಶಿಕ್ಷೆಯೊಂದಿಗೆ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. 
ಸರ್ಕಾರಿ ಅಭಿಯೋಜಕ ಬಿ.ಈ.ಯೋಗೇಶ್ವರ್ ಸರ್ಕಾರದ ಪರ ವಾದಿಸಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net