ಈ ಕುರಿತು ಮಾಹಿತಿ ನೀಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ಎರಡು ದಿನಗಳ ಹಿಂದೆ ನಗರಾಬಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯರನ್ನು ಭೇಟಿ ಮಾಡಿ, ನಗರದ ಒಳಚರಂಡಿ ವ್ಯವಸ್ಥೆ ಮತ್ತು ಲಕ್ಷ್ಮಣತೀರ್ಥ ನದಿ ಕಲುಷಿತಗೊಂಡಿರುವುದನ್ನು ಪ್ರಸ್ತಾಪಿಸಿದ್ದೆ. ನಗರದ ವಿವಿಧ ಪ್ರದೇಶಗಳ ಜನರು ಅಸಮರ್ಪಕ ಒಳಚರಂಡಿ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೊಸದಾಗಿ ಅಭಿವೃದ್ಧಿಯಾಗಿರುವ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕುರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಭೆಯಲ್ಲಿ ಚರ್ಚೆ ನಡೆದಿದೆ. ವಿಸ್ತೃತ ಅಂದಾಜು ಪಟ್ಟಿ ಸಿದ್ಧಪಡಿಸಲು ಮಂಡಳಿಯ 307ನೇ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ಕಲುಷಿತ ನೀರು ಸುತ್ತಮುತ್ತಲಿನ ಕೆರೆಗಳು ಹಾಗೂ ರೈತರ ಕೃಷಿ ಜಮೀನುಗಳಿಗೆ ಹರಿಯುತ್ತಿರುವುದರಿಂದ ಜಲಚರಗಳು, ಜನರು ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು, ಪರಿಸರ ಮಾಲಿನ್ಯ ಕೂಡ ಹೆಚ್ಚುತ್ತಿದೆ. ಈ ಎಲ್ಲ ವಿಷಯಗಳನ್ನು ಸಚಿವರ ಗಮನಕ್ಕೆ ತರಲಾಗಿದೆ ಎಂದರು.