ಹುಣಸೂರು ನಗರಸಭೆ ಅಧಿಕಾರಿಗಳಿಂದ ಜನರ ಹಣ ಲೂಟಿ

ಹುಣಸೂರು  ನಗರಸಭೆ
ಹುಣಸೂರು ನಗರಸಭೆ
Published on
ಹುಣಸೂರು: ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಖಾಸಗಿ ವ್ಯಕ್ತಿಗಳು ಜಾಯಿಂಟ್ ವ್ಹೀಲ್, ಟೈಟಾನಿಕ್ ಸೇರಿದಂತೆ ವಿವಿಧ ಮನರಂಜನಾ ಮೇಳಕ್ಕೆ ಅನುಮತಿ ನೀಡಿರುವ ನಗರಸಭೆ ಅಧಿಕಾರಿಗಳು ಲೂಟಿಗೆ ನಿಂತಿದೆ ಎಂದು ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು ಆರೋಪಿಸಿದರು.
ಇದೀಗ ಎಲ್ಲ ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಈ ಸಂಧರ್ಭದಲ್ಲಿ ಮೇಳಕ್ಕೆ ಅವಕಾಶ ನೀಡದಂತೆ ನಗರಸಭೆ ಮಾಜಿ ಅದ್ಯಕ್ಷ ಮಾಲಿಕ್ ಪಾಷ ಮಾ.23ರಂದು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರು. ಆದರೆ ಅದನ್ನು ಕಡೆಗಣಿಸಿ ಮೇಳ ಆರಂಭಿಸಲು ನಗರಸಭೆ ಅನುಮತಿ ನೀಡಿದೆ. ಇದೀಗ ಮೇಳ ಪ್ರವೇಶಕ್ಕೆ ಸಾರ್ವಜನಿಕರು ತಲಾ 50 ರೂ.ಗಳ ಪ್ರವೇಶದರ ನಿಗದಿಪಡಿಸಿದೆ. ಇಷ್ಟಕ್ಕೂ ಮೈದಾನ ಸರ್ಕಾರಕ್ಕೆ ಸೇರಿದ್ದರೂ ಮೇಳದ ಆಯೋಜಕರು ವಸೂಲು ಮಾಡುತ್ತಿರುವ ಪ್ರವೇಶದರ ನಗರಸಭೆ ಬೊಕ್ಕಸ ತುಂಬುತ್ತಿಲ್ಲ. ಬದಲಾಗಿ ಅಧಿಕಾರಿಗಳ ಜೇಬು ಸೇರುತ್ತಿದೆ. ಅಧಿಕಾರಿಗಳು ಸಾರ್ವಜನಿಕರ ಹಣ ಲೂಟಿ ಮಾಡಲು ಹೊರಟಿದ್ದಾರೆಂದು ಸಮಿತಿ ಅಧ್ಯಕ್ಷ ಸ್ವಾಮಿಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಮಿತಿ ಉಪಾಧ್ಯಕ್ಷ ಇಂಟೆಕ್ ರಾಜು ಮಾತನಾಡಿ, ಪ್ರವೇಶದರ ರದ್ದುಗೊಳಿಸಿರೆಂದು ಸಮಿತಿ ಪೌರಾಯುಕ್ತೆ ಕೆ.ಮಾನಸಾ ಅವರಿಗೆ ಒತ್ತಾಯಿಸಿದಾಗ, ಸಾಧ್ಯವಿಲ್ಲ, ಏನು ಮಾಡುತ್ತಿರೋ ಮಾಡಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ನಗರಸಭೆ ಅಧಿಕಾರಿಗಳ ಈ ವರ್ತನೆಯನ್ನು ಖಂಡಿಸಿ ತಕ್ಷಣದಿಂದಲೇ ಪ್ರವೇಶದರ ರದ್ದುಗೊಳಿಸಲು ಆಗ್ರಹಿಸಿ ಮಾ.31ರಂದು ನಗರಸಭೆ ಕಚೇರಿ ಮುಂಭಾಗ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಸಮಿತಿ ಕಾರ್ಯದರ್ಶಿ ಎಚ್.ಕೆ.ಸುರೇಶ್, ಸದಸ್ಯ ಗೋಪಿ, ಡಿ.ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net