ಹೊಸಲುಮಾರಮ್ಮ ದೇವಿಯ ಜಾತ್ರೆ ವಿಜೃಂಭಣೆ

ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಹೊಸಲು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಹೊಸಲು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on
ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸಲು ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಬಿಳಿಕೆರೆ ಹೋಬಳಿ ವ್ಯಾಪ್ತಿಯ 7 ಗ್ರಾಮಗಳಾದ ಮಲ್ಲಿನಾಥಪುರ, ಬೋಳನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು, ಬಿಳಿಕೆರೆ, ಮೈದನಹಳ್ಳಿ, ರಾಮೇನಹಳ್ಳಿ ಗ್ರಾಮದ ಜನರು ಒಂದಾಗಿ ಆಚರಿಸುವ ಜಾತ್ರಾ ಮಹೋತ್ಸವವನ್ನು ಸಂಪ್ರದಾಯದಂತೆ ದೇವಿಯ ಉತ್ಸವ ಮೂರ್ತಿಯನ್ನು ಮಲ್ಲಿನಾಥಪುರದಿಂದ ಮೆರವಣಿಗೆಯ ಮೂಲಕ ಹೊತ್ತು ತಂದರು.
ದಾರಿಯುದ್ದಕ್ಕೂ ಹರಕೆ ಹೊತ್ತವರು ತೆಂಗಿನಕಾಯಿ ಒಡೆಯುತ್ತಾ ಸಾಗಿಬಂದರು. ಮೆರವಣಿಗೆಯಲ್ಲಿ ಕಳಸಹೊತ್ತ ಮಹಿಳೆಯರು ಸಾಗಿಬಂದರು.
ದೇವಾಲಯದ ಆವರಣದಲ್ಲಿ ಉತ್ಸವ ಮೂರ್ತಿಯನ್ನು ಸ್ವಸ್ಥಾನಕ್ಕೆ ಸೇರಿಸಿದ ನಂತರ ಹರಕೆ ಹೊತ್ತವರು ಜೀವಂತ ಕೋಳಿಗಳನ್ನು ದೇವಾಲಯದ ಕಟ್ಟಡದ ಛಾವಣಿ ಮೇಲೆ ಎಸೆಯುವ ಮೂಲಕ ಹರಕೆ ತೀರಿಸಿಕೊಂಡರು. ಈ ಹಿಂದೆ ಕುರಿ ಮತ್ತು ಕೋಳಿಯನ್ನು ಬಲಿ ನೀಡಿ ಎಸೆಯಲಾಗುತ್ತಿತ್ತು. ಆದರೆ ನಾಲ್ಕು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಧಾರ್ಮಿಕ ದತ್ತಿ ಇಲಾಖೆ ನೇತೃತ್ವದಲ್ಲಿ ದೇವಿಯ ಉತ್ಸವ ನಡೆಯುತ್ತಿರುವುದರಿಂದ ಇದೀಗ ಪ್ರಾಣಿಬಲಿ ನಿಷೇಧಿಸಲಾಗಿದೆ.
ಜಾತ್ರೆ ಅಂಗವಾಗಿ ಜಾತ್ರಾಮಾಳದಲ್ಲಿ ಅಳವಡಿಸಿದ್ದ ಸಿಹಿ ಅಂಗಡಿಗಳು, ಮಕ್ಕಳ ಆಟಿಕೆ ಅಂಗಡಿಗಳಿಗೆ ಮಹಿಳೆಯರು ಮಕ್ಕಳು ಮುಗಿಬಿದ್ದಿದ್ದರು. ಅಲ್ಲದೇ ಬಿರುಬೇಸಿಗೆಯ ಧಗೆಯನ್ನು ತಣಿಸಲು ಅಲ್ಲಲ್ಲಿ ಮಜ್ಜಿಗೆಪಾನಕವನ್ನು ಭಕ್ತಾದಿಗಳಿಗೆ ಉಚಿತವಾಗಿ ಯುವಕರ ಸಂಘಗಳು, ದೇವಿಯ ಭಕ್ತರು ವಿತರಿಸಿದರು.
ಸಂಜೆ 6ರ ನಂತರ ನರಪಿಳ್ಳೆಯೂ ಇರುವಂತಿಲ್ಲ: ಈ ಉತ್ಸವದ ಮತ್ತೊಂದು ವಿಶೇಷವೆಂದರೆ ಸಂಜೆ 6 ಗಂಟೆ ನಂತರ ದೇವಾಲಯದ ಸುತ್ತ ಯಾರೊಬ್ಬರೂ ಇರುವಂತಿಲ್ಲ. ಜಾತ್ರೆಗಾಗಿ ಅಂಗಡಿ-ಮುಂಗಟ್ಟುಗಳನ್ನು ಕಟ್ಟಿಕೊಂಡವರು, ಜಾತ್ರೆಗೆ ಬಂದವರೂ 6 ಗಂಟೆಯೊಳಗೆ ಜಾಗ ಖಾಲಿ ಮಾಡುತ್ತಾರೆ. ಸಂಜೆಯ ನಂತರ ಅಮ್ಮನವರು ತಮ್ಮನ್ನು ನಂಬಿಕೊಂಡಿರುವ ಭಂಟರಿಗೆ ಊಟ ಬಡಿಸುತ್ತಾಳೆನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಯಾರೊಬ್ಬರೂ ಇರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net