ನಗದ ಸಿಪೆಟ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಓಪನ್ ಹೌಸ್’ ಕಾರ್ಯಕ್ರಮವನ್ನು ಡಿಡಿಪಿಐ ಡಿ.ಉದಯ ಕುಮಾರ್ ಉದ್ಘಾಟಿಸಿದರು. ಶ್ರೀಕಾಂತ್ ಶಿರಾಲಿ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು
ಕೇಂದ್ರೀಯ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ
ಮೈಸೂರು: ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್ ಇಲಾಖೆಯ ಅಧೀನದ ನಗರದ ಕೇಂದ್ರೀಯ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ(ಸಿಪೆಟ್) ಶನಿವಾರ ‘ಓಪನ್ ಹೌಸ್’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಎಡಿಪಿಐ, ಟಿಪಿಇಒ, ಇಸಿಒ, ಬಿಆರ್‌ಪಿ, ಬಿಐಇಆರ್‌ಟಿ, ಸಿಆರ್‌ಪಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡು ಸಿಪೆಟ್ ಕಾರ್ಯವೈಖರಿ ಹತ್ತಿರದಿಂದ ವೀಕ್ಷಿಸಿ ತಿಳಿದುಕೊಂಡರು.
ಜಿಲ್ಲೆಯ ವಿವಿಧ ಶಿಕ್ಷಣ ಇಲಾಖೆಯ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಈ ಸಂಸ್ಥೆಯ ಉತ್ಪನ್ನ ವಿನ್ಯಾಸ, ಸಾಂಚಿಕೆ (ಮೋಲ್ಡ್) ತಯಾರಿಕೆ, ಪ್ರಕ್ರಿಯೆ ತಂತ್ರಜ್ಞಾನ ಮತ್ತು ಗುಣಮಟ್ಟ ಪರೀಕ್ಷಾ ಸೇವೆಗಳ ತಾಂತ್ರಿಕ ಸಾಮರ್ಥ್ಯವನ್ನೂ ಪ್ರದರ್ಶಿಸಲಾಯಿತು.
ಪ್ರಾಂಶುಪಾಲ ಶ್ರೀಕಾಂತ್ ಶಿರಾಲಿ ಮಾತನಾಡಿ, ಸಿಪೆಟ್ ಭಾರತ ಸರ್ಕಾರದ ಪ್ರಮುಖ ಸಂಸ್ಥೆಯಾಗಿದ್ದು, ಪಾಲಿಮರ್, ಪೆಟ್ರೋ ಕೆಮಿಕಲ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಅಗತ್ಯವಿರುವ ತಾಂತ್ರಿಕ ಪರಿಣತಿ ಮತ್ತು ಕೌಶಲ ತರಬೇತಿ ಮೂಲಕ ನೀಡುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ಮತ್ತು ವಿದೇಶಗಳಲ್ಲಿ ಯಶಸ್ವಿ ಉದ್ಯೋಗಿಗಳು ಹಾಗೂ ಉದ್ಯಮಿಗಳಾಗಿದ್ದಾರೆ ಎಂದು ತಿಳಿಸಿದರು.
ಪಾಲಿಮರ್ ಮತ್ತು ಪ್ಲಾಸ್ಟಿಕ್ಸ್ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಇಲ್ಲಿ ನಡೆಸುತ್ತಿರುವ ವಿವಿಧ ಡಿಪ್ಲೊಮಾ ಹಾಗೂ ಉಚಿತ ಕೌಶಲಾಭಿವೃದ್ಧಿ ಕೋರ್ಸ್‌ಗಳು ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರಿಗೆ ಉತ್ತಮ ಉದ್ಯೋಗ ಮತ್ತು ಉದ್ಯಮಶೀಲತೆಗಾಗಿ ಮಾರ್ಗದರ್ಶನ ನೀಡುತ್ತವೆ.
ಪೆಟ್ರೋ ಕೆಮಿಕಲ್ ಮತ್ತು ಪಾಲಿಮರ್ ಕ್ಷೇತ್ರದಲ್ಲಿ ತಾಂತ್ರಿಕ ಪರಿಣತಿ ಹೊಂದಿದ ಮಾನವ ಸಂಪನ್ಮೂಲದ ಬೇಡಿಕೆ ಪೂರೈಸಲು ನಮ್ಮ ಸಂಸ್ಥೆ ಸದಾ ಬದ್ಧವಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಿ.ಉದಯಕುಮಾರ್ ಮಾತನಾಡಿ, ಸಿಪೆಟ್ ನೀಡುತ್ತಿರುವ ತಾಂತ್ರಿಕ ಶಿಕ್ಷಣ ಮತ್ತು ತರಬೇತಿ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುತ್ತಿದ್ದು, ಅವರ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಈ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತಲುಪಿಸಲು ಶಿಕ್ಷಣ ಇಲಾಖೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.