ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹೋಂಗಾರ್ಡ್ ಸಾವು

ವಿ.ಡಿ.ಹರೀಶ್
ವಿ.ಡಿ.ಹರೀಶ್
Published on

ಸಣ್ಣಪುಟ್ಟ ಗಾಯಗಳೊಂದಿಗೆ ಮೃತರ ಮಾವ ಪಾರು

ಹುಣಸೂರು: ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಿ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹೋಂಗಾರ್ಡ್ ಒಬ್ಬರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲೇ ಮೃತಪಟ್ಟರೆ, ಮೃತರ ಮಾವ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ತಾಲೂಕಿನ ವಡೇರಹೊಸಳ್ಳಿಯ ದಾಸೇಗೌಡರ ಪುತ್ರ ಹುಣಸೂರು ಹೋಂಗಾರ್ಡ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಡಿ.ಹರೀಶ್(33) ಮೃತಪಟ್ಟವರು. ಮೃತರಿಗೆ ಪತ್ನಿ ಒಬ್ಬ ಪುತ್ರನಿದ್ದಾನೆ.
ಬುಧವಾರ ರಾತ್ರಿಪಾಳಿ ಕರ್ತವ್ಯ ನಿರ್ವಹಿಸಿದ ನಂತರ ಗುರುವಾರ ಬೆಳಗ್ಗಿನ ಜಾವ 5 ಗಂಟೆ ಸುಮಾರಿನಲ್ಲಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಅರ್ಧ ದಾರಿಯಲ್ಲೇ ಬೈಕ್ ಕೆಟ್ಟು ನಿಂತಿದೆ. ಕೂಡಲೇ ತಮ್ಮ ಮಾವ ಪ್ರಕಾಶ್‌ಗೆ ಫೋನಾಯಿಸಿ ಬರಲು ತಿಳಿಸಿದ್ದಾರೆ. ಅಳಿಯನಿಗಾಗಿ ಮಾವ ತಮ್ಮ ಬೈಕ್‌ನೊಂದಿಗೆ ಬಂದು ಹರೀಶ್‌ರೊಂದಿಗೆ ತೆರಳುತ್ತಿದ್ದಾಗ, ವಡೇರಹೊಸಳ್ಳಿ ಬಳಿ ಇತ್ತೀಚೆಗೆ ಅಳವಡಿಸಿದ್ದ ವಿದ್ಯುತ್ ಕಂಬ ರಸ್ತೆ ಅಡ್ಡಲಾಗಿ ಬಿದ್ದಿದ್ದು ಕಣ್ಣಿಗೆ ಬೀಳಲಿಲ್ಲ. ನೇರವಾಗಿ ಕಂಬಕ್ಕೆ ಬೈಕ್ ಗುದ್ದಿದೆ. ಬೈಕ್ ಓಡಿಸುತ್ತಿದ್ದ ಮಾವ ಪ್ರಕಾಶ್ ನೆಲಕ್ಕೆ ಬಿದ್ದಾಗ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅಳಿಯ ಹರೀಶ್ ಬಿದ್ದ ರಭಸಕ್ಕೆ ಎದೆಗೆ ತೀವ್ರವಾಗಿ ಏಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾವ ಪ್ರಕಾಶ್ ಬಿಳಿಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಠಾಣೆ ಇನ್‌ಸ್ಪೆಕ್ಟರ್ ಪುನೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೋಂಗಾರ್ಡ್ ಡಿಸಿ ಭೇಟಿ: ಮೃತ ಹರೀಶ್ ನಿವಾಸಕ್ಕೆ ಹೋಂಗಾರ್ಡ್ ಡೆಪ್ಯುಟಿ ಕಮಾಂಡೆಂಟ್ ಸುದರ್ಶನ್‌ರಾವ್ ಗಾಯಕ್ವಾಡ್, ಹುಣಸೂರು ಘಟಕಾಧಿಕಾರಿ ಸಂಪತ್‌ಕುಮಾರ್, ಸಹಾಯಕ ಬೋಧಕ ಮಂಜುನಾಥ್ ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
18ಊಓ4
ಮೃತ ವಿ.ಡಿ.ಹರೀಶ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net