ಮೈಸೂರಿನಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ

ರಾಜೇಂದ್ರ ನಗರದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಬ್ರಹ್ಮಚಾರಿ ಆತ್ಮನಿರತಾಮೃತ ಚೈತನ್ಯ, ಬಸಪ್ಪ, ರಾಜೇಶ್ ಇದ್ದರು.
ರಾಜೇಂದ್ರ ನಗರದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಬ್ರಹ್ಮಚಾರಿ ಆತ್ಮನಿರತಾಮೃತ ಚೈತನ್ಯ, ಬಸಪ್ಪ, ರಾಜೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಂತಿಯಿಂದ ಇರುವ ಹಿಂದೂ ಸಮಾಜ ಏನಾದರೂ ಸಮಾಜಕ್ಕೆ ತೊಂದರೆ ಉಂಟಾದರೆ ತಕ್ಷಣ ಎದ್ದೇಳುತ್ತದೆ
  • ಯಾರಿಂದಲೂ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ
ಮೈಸೂರು: ಹಿಂದೂ ಸಮಾಜೋತ್ಸವ ಸಮಿತಿಯಿಂದ ನಗರದ ವಿವಿಧೆಡೆ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಾಗೂ ಸಮಾವೇಶ ಆಯೋಜಿಸಲಾಗಿತ್ತು.
ನಗರದ ವಿವಿಧ ಬಡಾವಣೆಗಳಲ್ಲಿ ಕೆಸರಿ ಧ್ವಜ ಹಿಡಿದು ಸ್ವಯಂ ಸೇವಕರು, ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು.
ರಾಜೇಂದ್ರ ನಗರದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಕರ್ನಾಟಕ ದಕ್ಷಿಣ ಪ್ರಾಂತ ಸಾಮರಸ್ಯ ಸಹ ಸಂಯೋಜಕ ರಾಜೇಶ್, ಹಿಂದೂ ಸಮಾಜ ಸಾಮರಸ್ಯದಿಂದ ಹೇಗೆ ಬದುಕಬೇಕು ಎನ್ನುವುದನ್ನು ತಿಳಿಸಿಕೊಟ್ಟಿದೆ. ಇದಕ್ಕಾಗಿ ರಾಜ್ಯದಲ್ಲಿ 20 ಸಾವಿರದ ಕಡೆ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಸುವ ಮೂಲಕ ಸಾಮರಸ್ಯ, ಒಗ್ಗಟ್ಟು ಪ್ರದರ್ಶಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ ಸಮಾಜ ಉತ್ಸವ ನಡೆಯುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು.
ಹಿಂದೂ ಸಮಾಜ ಶಾಂತಿಯುತವಾಗಿ ಇರುತ್ತದೆ. ಆದರೆ ಏನಾದರೂ ಸಮಾಜಕ್ಕೆ ತೊಂದರೆ ಉಂಟಾದರೆ ತಕ್ಷಣ ಎದ್ದೇಳುತ್ತದೆ ಎಂದರು.
ಪುರಾತನವಾದ ನಮ್ಮ ಹಿಂದೂ ಧರ್ಮವನ್ನು ನಾಶ ಮಾಡಲು ಅನೇಕರು ಪ್ರಯತ್ನಪಟ್ಟರು. ಆದರೆ ಯಾರಿಂದಲೂ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ. ಕೆಲವರು ಭಗದ್ಗೀತೆಯನ್ನು ಸುಟ್ಟುಹಾಕಿದರು. ಆದರೆ ನಮಗೆ ಕೇವಲ ಭಗದ್ಗೀತೆ ಒಂದೆ ಧರ್ಮ ಗ್ರಂಥವಲ್ಲ. ಅನೇಕ ಧರ್ಮಗ್ರಂಥಗಳಿವೆ ಎಂದು ಹೇಳಿದರು.
ಗ್ರೀಕ್ ಸಂಸ್ಕೃತಿಯ ಅಲೆಕ್ಸಾಂಡರ್ ನೂರಾರು ವರ್ಷಗಳ ಕಾಲ ಆಳ್ವಿಕೆ ಮಾಡಿದ್ದರೂ ಈಗ ಆ ಸಂಸ್ಕೃತಿ ಇಲ್ಲ. ಆದರೆ ನಮ್ಮ ಹಿಂದೂ ಧರ್ಮ ಇನ್ನು ಸಾವಿರಾರು ವರ್ಷ ಕಳೆದರೂ ಭೂಮಿ ಮೇಲೆ ಇದ್ದೇ ಇರುತ್ತದೆ. ನಮ್ಮ ಧರ್ಮವನ್ನು ಯಾರೋ ಒಬ್ಬ ರಾಜಸ್ಥಾಪಿಸಿಲ್ಲ. ಲಕ್ಷಾಂತರ ಸಾಮಾನ್ಯ ಜನರಿಂದ ನಮ್ಮ ಹಿಂದು ಧರ್ಮ ಸ್ಥಾಪನೆಗೊಂಡಿದೆ ಎಂದರು.
ಹಿಂದೆ ಅಸ್ಪೃಶ್ಯತೆ ನಿವಾರಣೆ ಹಿಂದೂ ಸಮಾಜಕ್ಕೆ ಹಿಡಿದ ಶಾಪವಾಗಿತ್ತು. ಈಗಿನ ಕಾಲದಲ್ಲಿ ಜಾತಿ ವ್ಯವಸ್ಥೆ ಅಗತ್ಯವಿಲ್ಲ. ಜಾತಿಯನ್ನು ಮನೆಯಲ್ಲಿ ಇಟ್ಟುಕೊಂಡು ಹೊರಗಡೆ ಬಂದಾಗ ಹಿಂದೂ ಆಗಿರಬೇಕು. ಈ ಜಾತಿ ಶ್ರೇಷ್ಠ , ಕನಿಷ್ಠ ಎನ್ನುವ ಸಮಾಜ ನಾಶ ಆಗುತ್ತದೆ. ಅಸ್ಪೃಶ್ಯತೆ ನಿವಾರಣೆ ಹೊರತು ಹಿಂದೂ ಸಮಾಜ ಉದ್ಧಾರ ಆಗಲು ಸಾಧ್ಯವಿಲ್ಲ. ಆದ್ದರಿಂದ ಹಿಂದೂ ಧರ್ಮದಲ್ಲಿ ಇಂತಹ ಸುಧಾರಣೆಗಳು ಆಗುತ್ತಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ನಮ್ಮ ಕುಟುಂಬದ ವ್ಯವಸ್ಥೆ ನಿಧಾನವಾಗಿ ನಾಶವಾಗುತ್ತಿದೆ. ಆಧುನಿಕತೆ ಹಾಗೂ ಪಾಶ್ಚಿಮಾತ್ಯ ಪದ್ಧತಿ ಅನುಸರಿಸುವ ಭರದಲ್ಲಿ ಕುಟುಂಬ ವ್ಯವಸ್ಥೆಯನ್ನು ಮರೆಯುತ್ತಿದ್ದಾರೆ. ಆರ್ಥಿಕವಾಗಿ ಸದೃಢರಾಗಿ ಚೆನ್ನಾಗಿರಬೇಕು ಎನ್ನುವ ಭಾವನೆ ಇದೆ. ಇಂದಿನದಿನಗಳಲ್ಲಿ ಯುವ ಸಮಾಜ ಅನೇಕ ದುಷ್ಚಟಗಳಿಗೆ ಬಲಿಯಾಗುತ್ತಿದೆ. ಇಂತಹ ನ್ಯೂನ್ಯತೆ ಹೋಗಿ ಹಿಂದೂ ಸಮಾಜ ಸಮೃದ್ಧವಾಗಿರಬೇಕು. ಆಗ ಮಾತ್ರ ಭಾರತ ಗಟ್ಟಿಯಾಗಿರುತ್ತದೆ ಎಂದು ಹೇಳಿದರು.
ಬೆಂಗಳೂರಿನ ಮಾತಾ ಅಮೃತಾನಂದಮಯಿಮಠದ ಆತ್ಮ ನಿರತಾಮೃತ ಚೈತನ್ಯ, ನಿವೃತ್ತ ಸೈನಿಕ ಬಸಪ್ಪ, ಮುಖಂಡ ಮಂಜುನಾಥ್ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಎನ್.ಆರ್. ಮೊಹಲ್ಲಾದ 1008 ಗಣಪತಿ ದೇವಸ್ಥಾನದ ಬಳಿಯಿಂದ ರಾಜೇಂದ್ರನಗರ ಮುಖ್ಯರಸ್ತೆಯಲ್ಲಿರುವ ಕೆಪಿಟಿಸಿಎಲ್ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಮೂಲಕ ಆಗಮಿಸಿದರು.
ಬಡಾವಣೆಯಲ್ಲಿ ಶೋಭಾಯಾತ್ರೆ:
ಮಕ್ಕಳಿಂದ ವಿವಿಧ ಸ್ವಾಂತಂತ್ರ್ಯ ಹೋರಾಟಗಾರರ, ಮಹಾ ಪುರುಷರ ವೇಷವನ್ನು ಧರಿಸಿ ಮೆರವಣಿಯಲ್ಲಿ ಸಾಗಿದರು. ಸಮಿತಿಯ ಕಾರ್ಯದರ್ಶಿ ಸತೀಶ್ ಜೋಗಿ, ಸದಸ್ಯರಾದ ರೋಹಿತ್, ಮಂಜುನಾಥ್ ಸ್ಮಾರ್ಟ್, ಸು.ಮುರುಳಿ, ಪ್ರೇಮ್, ಪ್ರಶಾಂತ್, ಎಸ್.ಎಲ್.ಆನಂದ, ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು, ಮುಖಂಡರು ಭಾಗವಹಿಸಿದ್ದರು.
ಸಹಿಷ್ಮುತೆಯ ಭಾರತ ನಮ್ಮದು
ಎಲ್ಲರನ್ನು ನಮ್ಮವರೆಂದು ಭಾವನಾತ್ಮಕವಾಗಿ ಸೆಳೆದುಕೊಳ್ಳುವ ದೇಶ ನಮ್ಮದು ಎಂದು ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಹೂಟಗಳ್ಳಿಯ ಸಂತೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು.
ಪುರಾತನ ಕಾಲದಿಂದಲೂ ಭಾರತ ಹಿಂದೂ ಧರ್ಮ ಆಚರಣೆಯ ಮೇಲೆ ನಡೆದುಕೊಂಡು ಬಂದಿದೆ. ಹೊರ ದೇಶದಿಂದ ದಂಡೆತ್ತಿ ಬಂದವರು ನಮ್ಮ ಸಂಸ್ಕೃತಿ, ಕಲೆ, ಪರಂಪರೆ, ಧರ್ಮವನ್ನು ಕಂಡು ಬೆರಗಾಗಿದ್ದಾರೆ. ಅಲ್ಲದೆ ಸ್ವಾಮಿ ವಿವೇಕಾನಂದರ ಮೂಲಕ ಇನಷ್ಟು ಭಾರತ ಹೊರ ದೇಶಗಳಿಗೆ ಪ್ರಕಾಶಿಸುವಂತೆ ಆಯಿತು ಎಂದರು.
ವಿಶ್ವಕ್ಕೆ ಶಾಂತಿ ಬಯಸುವಂತಹ ದೇಶ ನಮ್ಮದು. ಗಡಿ ದೇಶಗಳು ತಂಟೆ ಮಾಡಿದರೂ ಅಲ್ಲಿಯ ಜನರು ಸಂಕಷ್ಟಕ್ಕೀಡಾದಾಗ ಮಿಡಿಯುವಂತಹ ಹೃದಯವಂತಿದೆ ಇದೆ. ಅದಕ್ಕೆ ನಮ್ಮ ಹಿಂದೂ ಧರ್ಮ ಗ್ರಂಥಗಳು ಬೋಧನೆ ಕಾರಣ. ಇಲ್ಲಿಯ ನೆಲ, ಜಲ ಸ್ವರ್ಶಿಸಿದರೆ ಪುಣ್ಯ ಬರುತ್ತದೆ. ಅಂತಹ ಹಿಂದೂ ಧರ್ಮವನ್ನು ಎಲ್ಲರೂ ಆಚರಿಸುವ ಮೂಲಕ ಶಾಂತಿ ಸಹಬಾಳ್ವೆ ನಡೆಸಬೇಕು ಎಂದು ಹೇಳಿದರು.
ಅಖಿಲ ಭಾರತ ಟೋಳಿ ಸದಸ್ಯ ಕಂಜಪಾಡಿ ಸುಬ್ರಹ್ಮಣ್ಯ ಭಟ್ ಇತರರು ಇದ್ದರು. ಹೂಟಗಳ್ಳಿಯ ಮಾರುಗುಡಿ ಬಳಿಯ ಶ್ರೀರಾಮ ಮಂದಿರದಿಂದ ವಿವಿಧ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net