ನಿರಂತರ ಪರಿಶ್ರಮದಿಂದ ಉನ್ನತ ಸಾಧನೆ ಸಾಧ್ಯ:ಡಿಸಿಪಿ ಕೆ.ಎಸ್.ಸುಂದರ್‌ರಾಜ್
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪ ರ್ಧಾತ್ಮಕ ಪರೀಕ್ಷ ತರಬೇತಿ ಕಾರ್ಯಕ್ರಮ ಕೆ.ಎಸ್.ಸುಂದರ್ ರಾಜ್, ಡಾ.ಬಿ.ಎಸ್. ಪ್ರತಿಮಾ, ಪ್ರೊ.ಎಂ.ಎಸ್.ಅನಿತಾ, ಡಾ.ಎ.ಆನಂದ್, ಡಾ.ಕೃಷ್ಣರಾಜೇಂದ್ರ ಭರತ್, ಕೆ.ಸೌರಭಾ, ಡಾ.ಬಿ.ಸವಿತಾ ಇತರರು ಇದ್ದರು.
ವಿದ್ಯಾರ್ಥಿಗಳ ಗಮನವನ್ನು ದಿಕ್ಕು ತಪ್ಪಿಸುವ ಅಂಶಗಳು ಇಂದು ನಮ್ಮ ಸಮಾಜದ ಸುತ್ತಮುತ್ತಲೇ ನಡೆಯುತ್ತಿದ್ದು, ಎಚ್ಚರವಹಿಸಬೇಕು
ಮೈಸೂರು:ದೃಢ ಸಂಕಲ್ಪ ಬದ್ಧತೆ ಮತ್ತು ನಿರಂತರ ಪರಿಶ್ರಮದಿಂದ ಉನ್ನತ ಮಟ್ಟದ ಸಾಧನೆ ಸಾಧ್ಯ. ಶಿಕ್ಷಣದಲ್ಲಿ ಅಂಕಗಳಷ್ಟೇ ಮುಖ್ಯವಲ್ಲ. ಕೌಶಲಗಳ ಜತೆ ಭವಿಷ್ಯ ರೂಪಿಸಿಕೊಳ್ಳುವ ಅಗತ್ಯ ಹೆಚ್ಚಿದೆ ಎಂದು ನಗರ ಉಪ ಪೊಲೀಸ್ ಆಯುಕ್ತ ಕೆ.ಎಸ್.ಸುಂದರ್‌ರಾಜ್ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೋಶ ಮತ್ತು ಸ್ಪರ್ಧಾತ್ಮಕ ಪರೀಕ್ಷ ತರಬೇತಿ ಕೇಂದ್ರದಿಂದ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ಸೂಕ್ತ ಮಾರ್ಗದರ್ಶನದ ಕೊರತೆ ಇತ್ತು. ಆದರೆ ಇಂದಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಮಾರ್ಗದರ್ಶನ, ಪುಸ್ತಕಗಳು ಇದ್ದು, ಮನಸ್ಸು ಮಾಡಿದರೆ ಯಾವ ಸಾಧನೆಯು ಅಸಾಧ್ಯವಲ್ಲ ಎಂದರು.
ದೃಢಸಂಕಲ್ಪ ಬದ್ಧತೆ ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳ ಗಮನವನ್ನು ದಿಕ್ಕು ತಪ್ಪಿಸುವ ಅಂಶಗಳು ಇಂದು ನಮ್ಮ ಸಮಾಜದ ಸುತ್ತಮುತ್ತಲೇ ನಡೆಯುತ್ತಿವೆ. ಅವುಗಳಿಗೆ ಬಲಿಯಾಗದೆ ಬದುಕು ಕಟ್ಟಿಕೊಳ್ಳುವ ಕನಸು ಮತ್ತು ಪರಿಶ್ರಮದ ಕಡೆಗೆ ನಿಮ್ಮ ಗಮನ ಕೇಂದ್ರೀಕೃತವಾಗಿರಲಿ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಿಸಿದ ಕಾಲೇಜು ಶಿಕ್ಷಣ ಇಲಾಖೆ ಮೈಸೂರು ವಲಯದ ಜಂಟಿ ನಿರ್ದೇಶಕಿ ಡಾ.ಬಿ.ಎಸ್.ಪ್ರತಿಮಾ ಮಾತನಾಡಿ, ಪ್ರತಿ ಊರಿನಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಅಕಾಡೆಮಿಗಳು ಸಾವಿರಾರು ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ. ಆದರೆ ಅವುಗಳ ಶುಲ್ಕವನ್ನು ಪಾವತಿಸುವ ಸಾಮರ್ಥ್ಯ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಷ್ಟ ಸಾಧ್ಯ. ಆ ನಿಟ್ಟಿನಲ್ಲಿ ಕಾಲೇಜು ಆಯೋಜಿಸಿರುವ ಈ ತರಬೇತಿ ಕಾರ್ಯಕ್ರಮ ವಿಶಿಷ್ಟ ಮತ್ತು ಅರ್ಥಪೂರ್ಣವಾದದ್ದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಎಸ್. ಅನಿತಾ ಮಾತನಾಡಿ, ಜೀವನದಲ್ಲಿ ಗಟ್ಟಿಯಾಗಿ ನಿಲ್ಲುವ ಆಲೋಚನೆ ಮಾಡುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಲಿ ಎಂದು ಶುಭ ಕೋರಿದರು.
ಐಕ್ವೇಸಿ ಸಂಚಾಲಕ ಡಾ.ಎ.ಆನಂದ್, ಉದ್ಯೋಗ ಮಾಹಿತಿ ಕೋಶದ ಸಂಚಾಲಕರಾದ ಡಾ.ಕೃಷ್ಣರಾಜೇಂದ್ರ ಭರತ್, ಕೆ.ಸೌರಭಾ, ಡಾ.ಬಿ.ಸವಿತಾ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಚಾಲಕರಾದ ಪ್ರೊ.ಎನ್.ಪ್ರಕಾಶ್, ಡಾ.ಜಿ.ಲಲಿತಾ, ಪತ್ರಾಂಕಿತ ವ್ಯವಸ್ಥಾಪಕ ಕೆ.ವೆಂಕಟೇಶ್ ಇತರರು ಇದ್ದರು.