ಹೀಲಿಯಂ ಸ್ಫೋಟ ಪ್ರವಾಸಿಗರ ಸಂಖ್ಯೆ ಕ್ಷಿಣಿಸುವ ಆತಂಕ

ಅಪರಾಧ
ಅಪರಾಧ
Published on

ಪ್ರಮುಖ ಮುಖ್ಯಾಂಶಗಳು

  • ಅವಘಡದಿಂದ ವರ್ಷಾಂತ್ಯದ ವ್ಯಾಪಾರಕ್ಕೆ ಹೊಡೆತ
  • ಅರಮನೆಗೆ ಬೇಕಿದೆ ಸೂಕ್ತ ಭದ್ರತೆ
ಮೈಸೂರು: ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮುಂದೆ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟದಿಂದ ಮೂವರು ಮೃತಪಟ್ಟಿದ್ದು, ವರ್ಷಾಂತ್ಯ ಹಾಗೂ ಕ್ರಿಸ್‌ಮಸ್ ಸಡಗರದಲ್ಲಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶಾಕ್ ನೀಡಿದಂತಾಗಿದೆ.
ಪ್ರಕರಣ ಸಂಬಂಧ ಬಲೂನ್ ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಕನೋಜ್ ಜಿಲ್ಲೆ ತೊಫಿಯ ಗ್ರಾಮದ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮಂಜುಳಾ, ಬೆಂಗಳೂರಿನ ಲಕ್ಷ್ಮೀ ದುರಂತ ಅಂತ್ಯ ಕಂಡಿದ್ದಾರೆ.
ಅರಮನೆ ನಗರಿ ಮೈಸೂರಿನ ಜನನಿಬಿಡ ಪ್ರದೇಶದಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಮೈಸೂರು ಪ್ರಮುಖ ಪ್ರವಾಸಿನಗರಿಯಾಗಿದ್ದು, ಇಲ್ಲಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ, ದಸರಾ ವಸ್ತು ಪ್ರದರ್ಶನ ಸೇರಿ ಇತರೆ ತಾಣಗಳನ್ನು ವೀಕ್ಷಿಸಲು ನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಪೈಕಿ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಶಾಲಾ-ಕಾಲೇಜು ಮಕ್ಕಳು ಹೆಚ್ಚಾಗಿ ಪ್ರವಾಸಕ್ಕೆಂದು ಮೈಸೂರಿಗೆ ಆಗಮಿಸುತ್ತಾರೆ. ಪ್ರವಾಸೋದ್ಯಮದಿಂದಲೇ ಇಲ್ಲಿನ ಹೋಟೆಲ್ ಉದ್ಯಮ, ಆಟೋ, ಟ್ಯಾಕ್ಸಿ, ಬೀದಿ ಬದಿ ವ್ಯಾಪಾರಿಗಳು, ನಗರದ ಹೃದಯ ಭಾಗದ ಪ್ರಮುಖ ಬಟ್ಟೆ ವ್ಯಾಪಾರಿಗಳು ಜೀವನ ಕಟ್ಟಿಕೊಂಡಿದ್ದಾರೆ. ಸ್ಫೋಟ ಪ್ರಕರಣದಿಂದ ಪ್ರವಾಸಿಗರ ಸಂಖ್ಯೆ ಕ್ಷಿಣಿಸುವ ಆತಂಕವೂ ಇದೆ. ಹಾಗಾಗಿ, ಇಂತಹ ಪ್ರಕರಣಗಳು ಮರುಕಳಿಸದಂತೆ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಿದೆ.
ಇತ್ತೀಚಿಗೆ ಈ ಘಟನೆ ನಡೆದ ಕೂಗಳತೆ ದೂರದಲ್ಲಿರುವ ದಸರಾ ಮಹೋತ್ಸವದ ಸಂದರ್ಭದಲ್ಲಿ ದಸರಾ ವಸ್ತುಪ್ರದರ್ಶನಕ್ಕೆ ಹೊಂದಿಕೊಂಡಿರುವ ದೊಡ್ಡಕೆರೆ ಮೈದಾನದಲ್ಲಿ ಬಲೂನ್ ಮಾರಾಟಕ್ಕೆ ಕಲಬುರಗಿಯಿಂದ ಕುಟಂಬದೊಂದಿಗೆ ಬಂದಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಮೈಸೂರಿನ ಪಾಲಿಗೆ ಪ್ರಮುಖ ಆಚರಣೆಗಳಾದ ದಸರಾ, ಕ್ರಿಸ್‌ಮಸ್, ವರ್ಷಾಚರಣೆಯ ಸಂದರ್ಭದಲ್ಲೇ ಅವಘಡಗಳು ಘಟಿಸುತ್ತಿರುವುದು ಆತಂಕ ಮೂಡಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net