ನಗರದಲ್ಲಿ ಏ.14 ರಂದು ಅಶೋಕ ಯೂತ್ ಅಸೋಸಿಯೇಷನ್ ವತಿಯಿಂದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡುವ ಕಾರ್ಯಕ್ರಮ ಆಯೋಜಿಸಿದ್ದು, ಏಷ್ಯಾದಲ್ಲೇ ಎರಡನೆಯದೆಂಬ ದಾಖಲೆ ನಿರ್ಮಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆದ ನಗರ ಪಾಲಿಕೆ ಮಾಜಿ ಸದಸ್ಯ ಪಿ.ಟಿ.ಕೃಷ್ಣ ತಿಳಿಸಿದರು.
ಈ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಆಂಧ್ರ ಪ್ರದೇಶದಲ್ಲಿ ಪುಷ್ಪವೃಷ್ಟಿ ಮಾಡಲಾಗಿತ್ತು. ಇದಾದ ಬಳಿಕ ನಗರದಲ್ಲಿ ಈ ರೀತಿಯ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, ಅಂಬೇಡ್ಕರ್ ಪ್ರತಿಮೆಗೆ ಈ ರೀತಿಯ ಗೌರವ ಸಲ್ಲಿಸುತ್ತಿರುವ ಎರಡನೇ ಕಾರ್ಯಕ್ರಮ ಇದಾಗಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಜಕ್ಕೂರು ವಿಮಾನ ನಿಲ್ದಾಣದಿಂದ ಖಾಸಗಿ ಕಂಪನಿಯ ಹೆಲಿಕಾಪ್ಟರ್ ಹೊರಟು ಸುಮಾರು 11.30 ರ ವೇಳೆಗೆ ನಗರದ ಅಶೋಕ ವೃತ್ತದ ಮೇಲ್ಭಾಗಕ್ಕೆ ತಲುಪಿ ಒಂದಷ್ಟು ಕಾಲ ನಿಂತು ರಸ್ತೆಯಲ್ಲಿರುವ ಸ್ತಬ್ಧಚಿತ್ರದಲ್ಲಿನ ಅಂಬೇಡ್ಕರ್ ಪ್ರತಿಮೆ ಮೇಲೆ ಪುಷ್ಪವೃಷ್ಟಿ ಮಾಡಿದ ಬಳಿಕ ಜಕ್ಕೂರು ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಲಿದೆ. ಈ ಹೆಲಿಕಾಪ್ಟರ್‌ನಲ್ಲಿ ಅವರದೇ ಸಿಬ್ಬಂದಿ ಈ ಕಾರ್ಯ ನೆರವೇರಿಸಲಿದ್ದಾರೆ. ತಮ್ಮ ಸಂಸ್ಥೆಯ ಯಾರೊಬ್ಬರೂ ಅದರಲ್ಲಿರುವುದಿಲ್ಲ. ಹೀಗಾಗಿ ಎಲ್ಲ ಸುರಕ್ಷತಾ ಮಾನದಂಡ ಅನುಸರಿಸಲಾಗುತ್ತಿದೆ. ಜಿಲ್ಲಾಡಳಿತ ಸಹ ಅನುಮತಿ ನೀಡಿ ಇದಕ್ಕೆ ಸಹಕರಿಸುತ್ತಿದೆ ಎಂದು ವಿವರಿಸಿದರು.
ಅಲ್ಲದೆ ಏ.15 ರಿಂದ ಏ.17ರವರೆಗೆ ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಈ ರೀತಿ ಈ ಬಾರಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ತಮ್ಮ ಸಂಸ್ಥೆ ವಿಶಿಷ್ಟ ಹಾಗೂ ವಿನೂತನವಾಗಿ ಆಚರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಿ.ವಿ.ಗುರುರಾಜ್, ಕಾರ್ಯದರ್ಶಿಗಳಾದ ದೀಪಕ್ ಕುಮಾರ್, ಪ್ರಮೋದ್, ಪದಾಧಿಕಾರಿಗಳಾದ ರಾಘು, ಸುರೇಂದ್ರ, ಹೇಮಂತ್, ಸತೀಶ್ ಹಾಗೂ ಪ್ರಜ್ವಲ್ ಇದ್ದರು.