ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗಿನೊಂದಿಗೆ ಧಾರಾಕಾರ ಮಳೆ ಸುರಿದಿದ್ದು, ಕೆಲಕಾಲ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಹಲವು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಆ.13ರಂದು ನಗರದಲ್ಲಿ ಉತ್ತಮ ಮಳೆಯಾಗಿತ್ತು. ನಂತರದ ದಿನಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದರೂ ಹೆಚ್ಚಿನ ಪ್ರಮಾಣದ ಮಳೆಯಾಗದೆ ಅಲ್ಲಲ್ಲಿ ತುಂತುರು ಮಳೆಗೆ ಮಾತ್ರ ಸೀಮಿತವಾಗಿತ್ತು. ಮಂಗಳವಾರ ಮಧ್ಯಾಹ್ನ ದಿಢೀರನೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಗುಡುಗಿನೊಂದಿಗೆ ಮಳೆ ಆರಂಭವಾಯಿತು. ಮಧ್ಯಾಹ್ನ 2.55ರಿಂದ 3.30ರ ಅವಧಿಯಲ್ಲಿ ಮಳೆ ಆರ್ಭಟಿಸಿದ್ದು, ಕೆಲವೆಡೆ ರಸ್ತೆಗಳು ಜಲಾವೃತಗೊಂಡವು.
ಹಠಾತ್ ಸುರಿದ ಭಾರಿ ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು. ಕೆಲಸದ ನಿಮಿತ್ತ ಹೊರಗೆ ಬಂದಿದ್ದ ಸಾರ್ವಜನಿಕರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿ, ಕಟ್ಟಡಗಳ ಆಶ್ರಯ ಪಡೆಯಬೇಕಾಯಿತು. ಕೆಲ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯಾಯಿತು.
ಮುಂಗಾರು ವೈಫಲ್ಯದ ಆತಂಕ: ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದು ಮೈಸೂರು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ದೊರೆಯುವುದೇ ಎಂಬ ಪ್ರಶ್ನೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಲಭ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗುತ್ತಿದೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳು ಜಲಾಶಯ ಹಾಗೂ ಜಲಮೂಲಗಳ ಮೇಲೆ ಅವಲಂಬಿತವಾಗಿವೆ. ಮಳೆ ಪ್ರಮಾಣ ಕಡಿಮೆಯಾದರೆ ಜಲಮೂಲಗಳಿಗೆ ಸೇರುವ ನೀರಿನ ಪ್ರಮಾಣವೂ ಕುಸಿಯುವ ಸಾಧ್ಯತೆಯಿದ್ದು, ಇದರ ಪರಿಣಾಮವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಆತಂಕವಿದೆ.
ಇದರ ನಡುವೆ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿರುವುದು ಕೂಡ ರಾಜ್ಯದಲ್ಲಿ ನೀರಿನ ಲಭ್ಯತೆ ಕುರಿತು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮಳೆಯ ಕೊರತೆಯಿಂದ ನೀರಿನ ಸಂಗ್ರಹದ ಬಗ್ಗೆ ಆತಂಕವಿರುವ ಸಂದರ್ಭದಲ್ಲಿ ಜಲಾಶಯಗಳಿಂದ ನೀರು ಹೊರಬಿಡಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ನಿರ್ವಹಣೆ ಸವಾಲಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಮಳೆ ಸುರಿದಿರುವುದು ಹೊಸ ಆಶಾಭಾವನೆ ಮೂಡಿಸಿದೆ.
ಮುಂದುವರಿಯುವದೇ ಮಳೆ?: ಮಂಗಳವಾರದ ಮಳೆಯಿಂದ ನಗರದಲ್ಲಿ ತಾಪಮಾನವೂ ಕೊಂಚ ತಗ್ಗಿದ್ದು, ವಾತಾವರಣ ತಂಪಾಗಿದೆ. ಮಳೆ ಮುಂದಿನ ದಿನಗಳಲ್ಲೂ ಮುಂದುವರೆದರೆ ನಗರ ಹಾಗೂ ಜಿಲ್ಲೆಯ ಜಲಮೂಲಗಳಿಗೆ ಅನುಕೂಲವಾಗಲಿದೆ. ಆದರೆ, ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯ ಸಾಧ್ಯತೆ ಕಡಿಮೆ.