ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟ್‌ಔಟ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರು ದಸರಾ ಬದಲಾವಣೆ ಮಾಡಬಾರದು, ಸಂಪ್ರದಾಯಿಕವಾಗಿಯೇ ನಡೆಯಬೇಕು. ಪಾರ್ಕ್‌ಗಳಲ್ಲಿ ಶೇ.5 ಭಾಗವನ್ನು ಬೇರೆ ಉಪಯೋಗಕ್ಕೆ ಬಳಸಬಾರದು, ಉದ್ಯಾನವನ್ನು ಉದ್ಯಾನವಾಗಿಯೇ ಉಳಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಶೂಟ್‌ಔಟ್ ಮಾಡಿರುವುದು ಖಂಡನೀಯ. ಸಿಬ್ಬಂದಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲು ಮಾಡಬೇಕು. ಮೃತಪಟ್ಟ ಮೂವರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಹನೂರಿನಲ್ಲಿ ಶೂಟ್‌ಔಟ್‌ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳುತ್ತೇನೆ. ಬಿಜೆಪಿಯವರು ಇಂತಹ ವಿಚಾರವಾಗಿ ಹೋರಾಟ ಮಾಡಬೇಕು. ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲುಹೋರಾಟ ಮಾಡಿದರು. ಆದರೆ ಶೂಟ್‌ಔಟ್ ಪ್ರಕರಣದ ವಿಚಾರವಾಗಿ ಮುಖ್ಯಮಂತ್ರಿ ರಾಜೀನಾಮೆ ಕೇಳಬೇಕಿತ್ತು. ಹನೂರು ಪ್ರಕರಣವಾಗಿ ರಾಜ್ಯಾದ್ಯಾಂತ ಹೋರಾಟ ಮಾಡಲಾಗುವುದು ಎಂದರು.
ಕಂಬಳ ಬೇಡ
ಕಂಬಳ ಹಾಗೂ ದಸರಾಗೆ ಸಂಬಂಧ ಇಲ್ಲ, ಸಿಎಂ ಡಿ.ಕೆ.ಶಿವಕುಮಾರ್ ಅವರು ಒಮ್ಮೆ ಯೋಚಿಸಬೇಕು. ಮೈಸೂರಿನ ಹೋರಾಟಗಾರರು ಧ್ವನಿ ಎತ್ತಬೇಕು. ದಸರಾಕ್ಕೆ ತನ್ನದೇ ಆದ ಇತಿಹಾಸ ಇದೆ. ದಸರಾಗೆ ಕಂಬಳ ಆಚರಣೆ ಬೇಡ. 150 ತಾಲೂಕಿನಲ್ಲಿ ಬರಗಾಲ ಇದೆ. ಇಂತಹ ಸಂದರ್ಭದಲ್ಲಿ ಅದ್ದೂರಿಯಾಗಿ ದಸರಾ ಮಾಡುವುದು ಬೇಕೇ ಎಂದು ಪ್ರಶ್ನಿಸಿದರು. ಹೋರಾಟಗಾರರಾದ ಪಾರ್ಥಸಾರಥಿ, ತೇಜಸ್ ಲೋಕೇಶ್‌ಗೌಡ ಇತರರಿದ್ದರು.