14ರಂದು ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ

ಹನುಮಾನ್ ಚಾಲೀಸಾ ಪಾರಾಯಣ
ಹನುಮಾನ್ ಚಾಲೀಸಾ ಪಾರಾಯಣ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾಹಿತಿ
  • 45 ಸಾವಿರ ಜನರಿಗೆ ಆಸನ, 45 ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ
  • ಸಾವಿರಾರು ಭಕ್ತರಿಂದ ಹನುಮಾನ್ ಚಾಲೀಸಾ ಪಾರಾಯಣ
ಮೈಸೂರು: ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ಕಾರ್ಯಕ್ರಮವನ್ನು ಫೆ.14ರಂದು ಬೆಳಗ್ಗೆ 9ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದು, ಮೈಸೂರು ನಗರದಲ್ಲಿ ಎರಡನೇ ಬಾರಿಗೆ ಆಯೋಜಿಸಲಾಗಿದೆ.
45 ಸಾವಿರ ಜನರಿಗೆ ಆಸನ, 45 ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭವ್ಯ ವೇದಿಕೆಯನ್ನೂ ನಿರ್ಮಿಸಲಾಗುತ್ತಿದೆ ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಒಗ್ಗೂಡಿ ಹನುಮಾನ್ ಚಾಲೀಸಾ ಪಾರಾಯಣ ಮಾಡಲಿದ್ದಾರೆ. ತುಳಸೀದಾಸರು ರಚಿಸಿರುವ ಹನುಮಾನ್ ಚಾಲೀಸಾ ಅತ್ಯಂತ ಪವಿತ್ರವಾದದ್ದು ಹಾಗೂ ಸುಂದರಕಾಂಡ, ಸಂಪೂರ್ಣ ರಾಮಾಯಣದ ಸಾರವನ್ನು ಒಳಗೊಂಡಿದೆ. ಈ ಹಿಂದೆ ಆಂಧ್ರಪ್ರದೇಶದ ತೆನಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಭಕ್ತರು ಪಾಲ್ಗೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು ಎಂದು ಸ್ಮರಿಸಿದರು.
ಹನುಮಾನ್ ಚಾಲೀಸಾ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಹಾಡಬಹುದಾದ ಸುಲಭ ಹಾಗೂ ಶಕ್ತಿಶಾಲಿ ಸ್ತೋತ್ರ. ಹನುಮಂತನು ರಕ್ಷಕನಾಗಿದ್ದು, ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತಾನೆ. ಲೋಕ ಕಲ್ಯಾಣಕ್ಕಾಗಿ ಮತ್ತು ಜಗತ್ತಿನ ಒಳಿತಿಗಾಗಿ ಈ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಮರುದಿನವೇ ಶಿವರಾತ್ರಿ ಹಬ್ಬವಿರುವುದು ಈ ಕಾರ್ಯಕ್ರಮದ ವಿಶೇಷತೆ ಹೆಚ್ಚಿಸಿದೆ. ಹನುಮಂತನು ಶಿವನ ಅಂಶ ಹಾಗೂ ರಾಮನ ಪ್ರಿಯಭಕ್ತನಾಗಿದ್ದು, ಈ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಅತ್ಯಂತ ಫಲಪ್ರದ ಎಂದು ಶ್ರೀಗಳು ಹೇಳಿದರು.
ಒಬ್ಬರೇ ಪ್ರಾರ್ಥಿಸುವುದಕ್ಕಿಂತ ಸಾಮೂಹಿಕವಾಗಿ ಪ್ರಾರ್ಥಿಸುವುದರಲ್ಲಿ ಅಪಾರ ಶಕ್ತಿಯಿದೆ. ಪುರಾಣಗಳ ಪ್ರಕಾರ, ರಾಮಾವತಾರಕ್ಕೆ ಮುನ್ನ 33 ಕೋಟಿ ದೇವತೆಗಳು ಒಗ್ಗೂಡಿ ಪ್ರಾರ್ಥಿಸಿದಾಗ ಭಗವಂತನು ಪ್ರತ್ಯಕ್ಷನಾಗಿ ರಾವಣ ಸಂಹಾರದ ಭರವಸೆ ನೀಡಿದ್ದನು. ಅದೇ ರೀತಿ, ಲಕ್ಷಾಂತರ ಜನರು ಒಟ್ಟಾಗಿ ಸೇರಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿದಾಗ ಪ್ರತಿಯೊಬ್ಬರಿಗೂ ಆ ಸಂಪೂರ್ಣ ಪಾರಾಯಣದ ಪುಣ್ಯ ಲಭಿಸುತ್ತದೆ ಎಂದು ಶ್ರೀಗಳು ಸಾಮೂಹಿಕ ಪ್ರಾರ್ಥನೆಯ ಮಹತ್ವವನ್ನು ವಿವರಿಸಿದರು.
ಕರ್ನಾಟಕವು ಹನುಮನ ನಾಡು. ಇಲ್ಲಿನ ಭಕ್ತರೆಲ್ಲರೂ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಹನುಮಂತನ ಕೃಪೆಗೆ ಪಾತ್ರರಾಗಬೇಕು. ಭಕ್ತರೊಂದಿಗೆ ನಾನೂ ಇರುತ್ತೇನೆ, ನಾನೂ ಹಾಡುತ್ತೇನೆ. ಹನುಮಂತನ ರಕ್ಷೆ ಎಲ್ಲರಿಗೂ ಸಿಗಲಿ. ಸಾಮೂಹಿಕವಾಗಿ ಎಲ್ಲರೂ ಸೇರಿದಾಗ, ಒಬ್ಬೊಬ್ಬರ ಪ್ರಾರ್ಥನೆಯ ಫಲವೂ ಎಲ್ಲರಿಗೂ ದೊರೆಯುತ್ತದೆ. ಇದು ಸಾಮೂಹಿಕ ಪ್ರಾರ್ಥನೆಯ ವಿಶೇಷ ಎಂದು ತಿಳಿಸಿದರು.
ಫೆ.14ರ ದಿನವನ್ನು ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ಆದ್ಯತೆ ನೀಡಿದ್ದು, ಆ ದಿನ ಸೀತಾ-ರಾಮ ಒಂದಾದ ದಿನ. ಹೀಗಾಗಿ ಆ ದಿನವನ್ನು ಆಯ್ಕೆ ಮಾಡಲಾಗಿದೆ. ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ನಮ್ಮೊಂದಿಗೆ ಮೈಸೂರಿನ ಹಲವಾರು ಸಂಘ, ಸಂಸ್ಥೆಗಳು ಕೈಜೋಡಿಸಿವೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net