ತಿಂಗಳೊಳಗೆ 870 ಫಲಾನುಭವಿಗಳಿಗೆ ನಿವೇಶನ ಹಸ್ತಾಂತರಿಸಿ

ತಿಂಗಳೊಳಗೆ 870 ಫಲಾನುಭವಿಗಳಿಗೆ ನಿವೇಶನ ಹಸ್ತಾಂತರಿಸಿ
ತಿಂಗಳೊಳಗೆ 870 ಫಲಾನುಭವಿಗಳಿಗೆ ನಿವೇಶನ ಹಸ್ತಾಂತರಿಸಿ
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಆಗ್ರಹ
ಹುಣಸೂರು : ಇಪ್ಪತ್ತು ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ ನಿವೇಶನದ ಹಕ್ಕುಪತ್ರ ವಿತರಿಸಿದ್ದ 870 ಫಲಾನುಭವಿಗಳಿಗೆ ಒಂದು ತಿಂಗಳೊಳಗೆ ನಗರಸಭೆ ವತಿಯಿಂದ ನಿವೇಶನ ಗುರುತಿಸಿ ಹಸ್ತಾಂತರಿಸಬೇಕು. ತಪ್ಪಿದಲ್ಲಿ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ವಿತರಿಸುವ ಕಾರ್ಯ ನಡಸಲಿದೆ ಎಂದು ಸಮಿತಿ ಸದಸ್ಯರು ಎಚ್ಚರಿಸಿದರು.
ಎರಡು ದಶಕಗಳೇ ಸಂದರೂ ನಗರವ್ಯಾಪ್ತಿಯ 870 ಬಡ ಕುಟುಂಬಗಳಿಗೆ 2004ರಲ್ಲಿ ಅಂದಿನ ಶಾಸಕ ಕೋಡಿ ವಿ.ಪಾಪಣ್ಣ ಆಶ್ರಯ ಯೋಜನೆಯಡಿ 870 ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಯಿಂದ ಅನುಮೋದನೆಗೊಂಡು ಹಕ್ಕುಪತ್ರ ವಿತರಿಸಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಈ ಫಲಾನುಭವಿಗಳಿಗೆ ನಿವೇಶನ ಗುರುತಿಸಿಕೊಡುವ, ಶಾಶ್ವತ ಸೂರು ಕಲ್ಪಿಸುವತ್ತ ಜನಪ್ರತಿನಿಧಿಗಳಾಗಲಿ, ನಗರಸಭೆ ಅಧಿಕಾರಿ ವರ್ಗವಾಗಲಿ ಮುಂದಾಗದಿರುವುದು ದುರ್ದೈವದ ಸಂಗತಿ. ರಾಜಕಾರಣದ ಪರಮಾವಧಿಯಾಗಿ ಜನಪ್ರತಿನಿಧಿಗಳು ನಡದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮಾನವೀಯ ನೆಲೆಗಟ್ಟಿನಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕಿದೆ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಬೇಸರಿಸಿದರು.
ಸಮಿತಿ ಉಪಾಧ್ಯಕ್ಷ ಇಂಟೆಕ್ ರಾಜು ಮಾತನಾಡಿ, 2009ರಲ್ಲಿ ಶಾಸಕರಾಗಿದ್ದ ಎಚ್.ಪಿ.ಮಂಜುನಾಥ್ ಆಶ್ರಯಸಮಿತಿ ಸಭೆ ಆಯೋಜಿಸಿ 2004ರಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ 870 ಫಲಾನುಭವಿಗಳಿಗೆ ನಿವೇಶನ ನೀಡುವ ಕುರಿತು ಸಭೆ ಅನುಮೋದನೆ ನೀಡಿತ್ತು. ಆದರೆ 2011ರ ಜನವರಿಯಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ನಿವೇಶನ ಅಭಿವೃದ್ಧಿಗೊಂಡಿಲ್ಲವೆಂದು ಸಬೂಬು ಹೇಳಿದರೆ, 2011ರ ಡಿಸೆಂಬರ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಕ್ಕುಪತ್ರಗಳ ಪರಿಶೀಲನೆ ನಡಸಲು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿಗಳೇ ಅನುಮೋದಿಸಿರುವ ಫಲಾನುಭವಿಗಳ ಪಟ್ಟಿಯನ್ನು ಮರು ಪರಿಶೀಲನೆ ನಡೆಸಲು ಯಾರು ಅಧಿಕಾರ ನೀಡಿದರು? 2012 ಮತ್ತು 14ರಲ್ಲಿ ನಡೆದ ಸಭೆಯಲ್ಲೂ ಇಂತಹುದೇ ಸಬೂಬುಗಳನ್ನು ಹೇಳಲಾಗಿದೆ. 2018 ಎಚ್.ವಿಶ್ವನಾಥ್ ಶಾಸಕರಾಗಿದ್ದ ವೇಳೆ ಜಿ ಪ್ಲಸ್ ಒನ್ ಮಾಧರಿ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಯಿತೇ ಹೊರತು ಆಶ್ರಯ ಯೋಜನೆಯ ಫಲಾನುಭವಿಗಳ ಕುರಿತು ನಿರ್ಧರಿಸಲೇ ಇಲ್ಲ. ಇದೀಗ ಶಾಸಕ ಜಿ.ಡಿ.ಹರೀಶ್‌ಗೌಡರ ನೇತೃತ್ವದಲ್ಲಿ 2024ರಲ್ಲಿ ನಡೆಸ ಸಭೆಯಲ್ಲಿ ಅರ್ಹರು, ಅನರ್ಹರು ಮರುಪರಿಶೀಲನೆ ಹೀಗೆ ಸಭೆಯ ನಿರ್ಣಯ ಡೆದಿದೆ. ಒಟ್ಟಿನಲ್ಲಿ ಜನಪ್ರತಿನಿಧಿಗಳ ಸ್ವಹಿತಾಸಕ್ತಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯೇ ಫಲಾನುಭವಿಗಳಿಗೆ ನ್ಯಾಯ ದೊರಕದಿರಲು ಕಾರಣವಾಗಿದೆ ಎಂದು ಆರೋಪಿಸಿದರು.
ಈ ಹಿಂದೆಯೇ ನಗರಸಭೆ ನಿವೇಶನ ಗುರುತಿಸಿ ನಕ್ಷೆಯನ್ನೂ ಸಿದ್ಧಪಡಿಸಿದೆ ಎಂದು ನಕ್ಷೆಯನ್ನು ಪ್ರದರ್ಶಿಸಿದ ಅವರು, ಮುಂದಿನ ಒಂದು ತಿಂಗಳಿನಲ್ಲಿ ನಗರಸಭೆ ಅಧಿಕಾರಿಗಳು ಲಾನುಭವಿಗಳಿಗೆ ನಿವೇಶನ ಗುರುತಿಸಿ ವಿತರಿಸದಿದ್ದರೆ ಸಮಿತಿಯ ವತಿಯಿಂದ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ವಿತರಿಸುವ ಕಾರ್ಯ ನಡೆಸಲಾಗುವುದು. ಎಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿ ಸುರೇಶ್, ಸಂಚಾಲಕ ಕೆ.ಎಸ್.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ವಿಷಕಂಠಮೂರ್ತಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net