ಕಾಡುಪ್ರಾಣಿ ದಾಳಿಗೆ ಜಾನುವಾರು ಬಲಿ

ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದಲ್ಲಿ ಜಾನುವಾರು ಕಾಡುಪ್ರಾಣಿಯ ದಾಳಿಗೆ ತುತ್ತಾಗಿರುವ ಸ್ಥಳ ಪರಿಶೀಲನೆ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು.
ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದಲ್ಲಿ ಜಾನುವಾರು ಕಾಡುಪ್ರಾಣಿಯ ದಾಳಿಗೆ ತುತ್ತಾಗಿರುವ ಸ್ಥಳ ಪರಿಶೀಲನೆ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು.
Published on
ಹನಗೋಡು: ಹೋಬಳಿಯ ವಡ್ಡಂಬಾಳು ಗ್ರಾಮದಲ್ಲಿ ಸೋಮವಾರ ಕಾಡುಪ್ರಾಣಿ ದಾಳಿಗೆ ಜಾನುವಾರು ಬಲಿಯಾಗಿದೆ.
ಘಟನೆ ಬಳಿಕ ಇದು ಹುಲಿ ದಾಳಿಯೋ ಅಥವಾ ಚಿರತೆ ದಾಳಿಯೋ ಎಂಬ ಕುರಿತು ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ವಡ್ಡಂಬಾಳು ಗ್ರಾಮದ ನಾಗೇಶ್‌ರಾವ್ ಅವರಿಗೆ ಸೇರಿದ ಜಾನುವಾರನ್ನು ಭಾನುವಾರ ಜಮೀನಿನಲ್ಲಿ ಮೇಯಲು ಬಿಡಲಾಗಿತ್ತು. ಸಂಜೆ ವೇಳೆ ಉಳಿದ ಜಾನುವಾರುಗಳು ಮನೆಗೆ ಮರಳಿದರೂ ಒಂದು ಜಾನುವಾರು ಕಾಣೆಯಾಗಿತ್ತು. ಇದರಿಂದ ಕುಟುಂಬಸ್ಥರು ರಾತ್ರಿಯಿಡೀ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಸೋಮವಾರ ಮಧ್ಯಾಹ್ನ ತಮ್ಮ ಜಮೀನಿನ ಮರ-ಗಿಡಗಳ ಪೊದೆಯಲ್ಲಿ ಜಾನುವಾರಿನ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪರಿಶೀಲನೆ ನಡೆಸಿದರು.
ಗ್ರಾಮಸ್ಥರು ಇದು ಹುಲಿ ದಾಳಿ ಎಂದು ಆರೋಪಿಸುತ್ತಿದ್ದು, ಈ ಭಾಗದಲ್ಲಿ ಹುಲಿಯ ಓಡಾಟ ಹೆಚ್ಚಾಗಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಪರಿಶೀಲನೆ ಆಧರಿಸಿ ಇದು ಚಿರತೆ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಹಾಗೂ ಜಾನುವಾರು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net