ಮೃತಪಟ್ಟವರಿಗೂ ‘ಗ್ಯಾರಂಟಿ’ ಸೌಲಭ್ಯ : ಗ್ಯಾರಂಟಿ ಅನುಷ್ಠಾನ ಸಮಿತಿ ಅಸಮಾಧಾನ
ಮೈಸೂರು ಜಿಲ್ಲಾ ಪಂಚಾಯತ್‌ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು. ಅರುಣ್ ಕುಮಾರ್, ಎಸ್.ಯುಕೇಶ್ ಕುಮಾರ್, ಶಿವಕುಮಾರ್, ಹುಣಸೂರು ಬಸವಣ್ಣ, ಬಿ.ಎನ್. ಕರೀಗೌಡ ಹಾಗೂ ಇತರರು ಇದ್ದರು.
ಮೈಸೂರು: ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ತಲುಪಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್‌ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೂ ಗೃಹಲಕ್ಷ್ಮೀಯ ಹಣ ಹೋಗುತ್ತಿದ್ದು, ಕೂಡಲೇ ಸ್ಥಗಿತಗೊಳಿಸಿ ಅರ್ಹರಿಗೆ ಮಾತ್ರ ದೊರೆಯುವಂತೆ ಮಾಡಬೇಕು. ಮೃತಪಟ್ಟವರ ಕುಟುಂಬದಲ್ಲಿ ಮಹಿಳೆಯರು ಇದ್ದರೆ ಅವರನ್ನು ಕುಟುಂಬದ ಯಜಮಾನಿ ಎಂದು ಪರಿಗಣಿಸಿ ಗೃಹಲಕ್ಷ್ಮೀ ಹಣವನ್ನು ನೀಡಬೇಕು ಎಂದು ನಿರ್ದೇಶನ ನೀಡಿದರು.
ಬಿಪಿಎಲ್ ಕಾರ್ಡ್ ಮಾಡಿಸಲು ಪೋರ್ಟಲ್ ಓಪನ್ ಆದಾಗ ಪತ್ರಿಕಾ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಮಾಹಿತಿ ದೊರೆಯುವಂತೆ ಮಾಡಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಅತ್ಯವಶ್ಯಕವಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದೆ ಇದ್ದರೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಹಾಗೂ ಸ್ಕಾೃನಿಂಗ್ ಸೌಲಭ್ಯಗಳು ದೊರೆಯುವುದಿಲ್ಲ. ಆದ್ದರಿಂದ ಅರ್ಹರಿಗೆ ಬಿಪಿಎಲ್ ಕಾರ್ಡಗಳನ್ನು ನೀಡಲು ಕ್ರಮವಹಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಆರ್‌ಓ ಘಟಕಗಳನ್ನು ಅಳವಡಿಸಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್ ಹಣವನ್ನು ಆನ್‌ಲೈನ್‌ನಲ್ಲಿಯೂ ಪಾವತಿ ಮಾಡುವ ವ್ಯವಸ್ಥೆ ಇರುವ ಬಗ್ಗೆ ಫಲಕಗಳನ್ನು ಅಳವಡಿಸಿ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಮಾತನಾಡಿ, ಗೃಹಲಕ್ಷ್ಮೀ ಹಣವನ್ನು ಯಾವುದೇ ಬ್ಯಾಂಕ್‌ನವರು ಸಾಲಕ್ಕೆ ವಜಾ ಮಾಡಿಕೊಳ್ಳದೆ ಮಾನವೀಯತೆ ಆಧಾರದ ಮೇಲೆ ಫಲಾನುಭವಿಗಳಿಗೆ ನೀಡಬೇಕು. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮೃತಪಟ್ಟರೆ ಅವರಿಗೆ ಹಣ ಪಾವತಿ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೂ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪುತ್ತಿದೆ. ಇದುವರೆಗೆ ಎಷ್ಟು ಜನರಿಗೆ ಎಷ್ಟು ಮೊತ್ತದ ಹಣ ಪಾವತಿಯಾಗಿದೆ? ಎಷ್ಟು ವಸೂಲಾತಿಯಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 6,80,301 ಪಡಿತರ ಚೀಟಿಗಳು ಇವೆ. ಐಟಿ ಪಾವತಿ ಮಾಡಿರುವ ಹಾಗೂ 7.5 ಹೆಕ್ಟರ್ ಭೂಮಿ ಹೊಂದಿರುವವರ 23 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾಯಿಸಲಾಗಿದೆ. ಕೆಲವರು ಮನೆ ನಿರ್ಮಾಣ ಮುಂತಾದ ಕಾರ್ಯಗಳಿಗೆ ಸಾಲ ಮಾಡುವ ಸಲುವಾಗಿ ಐಟಿ ಮಾಡಿಸಿರುತ್ತಾರೆ. ಅಂತಹ ವ್ಯಕ್ತಿಗಳ ದಾಖಲೆಗಳು ಹಾಗೂ ಕುಟುಂಬದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತೆ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನಿಲ್ ಮಾತನಾಡಿ, ಜಿಲ್ಲೆಯಲ್ಲಿ 9,68,228 ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಆಗಿದ್ದಾರೆ. 6548 ಫಲಾನುಭವಿಗಳು ನೋಂದಣಿಗೆ ಬಾಕಿ ಇದ್ದಾರೆ. ಶೇ. 60 ರಷ್ಟು ಫಲಾನುಭವಿಗಳಿಗೆ ಶೂನ್ಯ ಬಿಲ್ ಬರುತ್ತಿದೆ. ಶೇ. 40 ಫಲಾನುಭವಿಗಳು ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ಬಿಲ್ ಬರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷರಾದ ಹುಣಸೂರು ಬಸವಣ್ಣ, ಬಿ.ಎನ್. ಕರೀಗೌಡ, ತಾಲೂಕು ಅಧ್ಯಕ್ಷ ನಿತಿನ್ ವೆಂಕಟೇಶ್, ಸದಸ್ಯರಾದ ಸಾ.ಮಾ.ಯೋಗೇಶ್, ಎಂ.ಎಸ್. ಮಹದೇವ, ಲಲಿತಾ, ಅಬ್ದುಲ್ ಖಾದರ್ ಹಾಗೂ ಇತರರು ಇದ್ದರು.