ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಹನ ಮತ್ತು ಮೃದು ಕೌಶಲ ಕುರಿತು ಕಾರ್ಯಾಗಾರವನ್ನು ಮೈವಿವಿ ವೃತ್ತಿ ಕೇಂದ್ರದ ಸಂಯೋಜಕ ಪ್ರೊ.ಆರ್.ಮಹೇಶ್ ಉದ್ಘಾಟಿಸಿದರು. ಡಾ. ರೇಚಣ್ಣ, ವಿ.ಉಮೇಶ್, ಡಾ.ಎ.ಜಿ.ಧರ್ಮೇಶ ಇತರರು ಇದ್ದರು.
ವಿದ್ಯಾರ್ಥಿಗಳು ಉತ್ತಮ ಅಂಕಗಳ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು
ಮೈಸೂರು: ಇಪ್ಪತ್ತೊಂದನೇ ಶತಮಾನದಲ್ಲಿ ಸಂವಹನ ಮತ್ತು ಮೃದು ಕೌಶಲ ಅತ್ಯಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ವೃತ್ತಿ ಕೇಂದ್ರದ ಸಂಯೋಜಕ ಪ್ರೊ.ಆರ್.ಮಹೇಶ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವೃತ್ತಿಕೇಂದ್ರದ ಸಹಯೋಗದಲ್ಲಿ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಹನ ಮತ್ತು ಮೃದು ಕೌಶಲ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಭಾಷಾ ಸಂವಹನ ಕೌಶಲ ಹೊಂದುವ ಮೂಲಕ ಬೆಳವಣಿಗೆ ಸಾಧಿಸಬೇಕು ಎಂದರು.
ಮೃದು ಕೌಶಲಗಳು ಇಲ್ಲದ ಬೌದ್ಧಿಕ ಸಾಮರ್ಥ್ಯವು ಕಡಿಮೆ ಮೌಲ್ಯವನ್ನು ಹೊಂದಿರುತ್ತದೆ. ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಜತೆಗೆ ಭವಿಷ್ಯದಲ್ಲಿ ಉದ್ಯೋಗದ ಯೋಗ್ಯತೆಯನ್ನು ಹೆಚ್ಚಿಸುತ್ತವೆ ಎಂದು ಮನವರಿಕೆ ಮಾಡಿಕೊಟ್ಟರು.
ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ.ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು. ಸಂವಹನ ಕೌಶಲಗಳಿಲ್ಲದ ಜ್ಞಾನವು ನಿಷ್ಪ್ರಯೋಜಕ ಎಂದು ಹೇಳಿದರು.
ಪ್ರಾಂಶುಪಾಲ ಡಾ.ರೇಚಣ್ಣ, ಪ್ಲೇಸ್‌ಮೆಂಟ್ ಅಧಿಕಾರಿ ವಿ.ಉಮೇಶ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎ.ಜಿ.ಧರ್ಮೇಶ ಇದ್ದರು.
ಬಳಿಕ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಪ್ರಮಾಣಿಕೃತ ವೃತ್ತಿ ಸಲಹೆಗಾರ ರಾಘವೇಂದ್ರ ಪತ್ತಾರ್ ಅವರು ವೃತ್ತಿಪರ ಸಂವಹನ ಮತ್ತು ಪ್ರೊಫೈಲ್ ಬಿಲ್ಡಿಂಗ್ ವಿಷಯ ಕುರಿತಂತೆ ಪ್ರಬಂಧ ಮಂಡಿಸಿದರು. ಎಸ್.ವಿ. ಇನ್ಫೋಟೆಕ್ ವ್ಯವಸ್ಥಾಪಕ ಎಚ್. ವಿ. ಸುಹಾಸ್ ವೃತ್ತಿ ಅರಿವು ಮತ್ತು ಉದ್ಯೋಗಾರ್ಹತೆಯ ಕೌಶಲಗಳು ಕುರಿತಂತೆ ಮಾತನಾಡಿದರು.