ಆವಿಷ್ಕಾರಗಳಿಗೆ ಹೊಂದಿಕೊಂಡರೆ ಬೆಳವಣಿಗೆ ಸಾಧ್ಯ:ಪ್ರೊ.ಪರೀಕ್ಷತ್ ಸಿಂಗ್‌ಮನ್ಹಾಸ್ ಅಭಿಮತ
ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ(ಇಎಂಆರ್‌ಸಿ)ದಿಂದ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಪ್ರೊ.ಪರೀಕ್ಷತ್ ಸಿಂಗ್‌ಮನ್ಹಾಸ್ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ಎಸ್.ಜೆ.ಮಂಜುನಾಥ್, ಪ್ರೊ.ಎ.ಬಾಲಸುಬ್ರಹ್ಮಣಿಯನ್, ಡಾ.ಗಂಟಾ ರವಿಕುಮಾರ್, ಶಿವಶಂಕರ್ ಬೆಳ್ಳಿಯಪ್ಪ ಇದ್ದರು.
ಕೃತಕ ಬುದ್ಧಿಮತ್ತೆ ಕಾಲಘಟ್ಟದಲ್ಲಿ ಆಲೋಚನೆಗಳು ಮತ್ತು ಪ್ರಸ್ತುತ ಪಡಿಸುವ ವಿಚಾರಗಳು ಸಾರ್ವತ್ರಿಕವಾಗಿಬೇಕು
ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಪ್ರಸ್ತುತ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದರೆ, ಎಲ್ಲಿಯೂ ಬೆಳೆಯಲು ಸಾಧ್ಯವಿಲ್ಲ
ಮೈಸೂರು:ಬದಲಾಗುತ್ತಿರುವ ತಂತ್ರಜ್ಞಾನ, ಹೊಸ ಆವಿಷ್ಕಾರಗಳಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳದಿದ್ದರೆ ಆಧುನಿಕ ದಿನಗಳಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ಶೈಕ್ಷಣಿಕ ಸಂವಹನ ಒಕ್ಕೂಟ(ಸಿಇಸಿ)ದ ನಿರ್ದೇಶಕ ಪ್ರೊ.ಪರೀಕ್ಷತ್ ಸಿಂಗ್‌ಮನ್ಹಾಸ್ ಹೇಳಿದರು.
ಮೈಸೂರು ವಿಶ್ವ ವಿದ್ಯಾಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್‌ಸಿ)ದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಭವಿಷ್ಯದಲ್ಲಿ ಶಿಕ್ಷಣ ಪರಿವರ್ತನೆ; ಬುದ್ಧಿವಂತಿಕೆ, ಒಳಗೊಳ್ಳುವಿಕೆ ಮತ್ತು ಕಲಿಕೆಯಲ್ಲಿ ತಲ್ಲೀನತೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ ಕಾಲಘಟ್ಟದಲ್ಲಿ ಆಲೋಚನೆಗಳು ಮತ್ತು ಪ್ರಸ್ತುತ ಪಡಿಸುವ ವಿಚಾರಗಳು ಸಾರ್ವತ್ರಿಕವಾಗಿಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಕಾರ್ಯವನ್ನು ಸಿಇಸಿ ಯಶಸ್ವಿಯಾಗಿ ಮಾಡುತ್ತಿದೆ ಎಂದು ತಿಳಿಸಿದರು.
ಇಂಗ್ಲಿಷ್ ಭಾಷೆಯಲ್ಲಿರುವ ಐದು ಸ್ವರಗಳಂತೆ ಹೊಂದಿಕೊಳ್ಳುವ ಗುಣ ಮತ್ತು ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಪ್ರಸ್ತುತ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದರೆ, ಎಲ್ಲಿಯೂ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಪಠ್ಯದ ಜತೆಗೆ ಕ್ರೀಡೆ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಲ್ಲದೆ ಕಲಿಕಾ ಅನುಭವ ಪಡೆದುಕೊಳ್ಳಬೇಕು. ಬಹು ಕೌಶಲದೊಂದಿಗೆ ವಿಭಿನ್ನ ದಿಕ್ಕುಗಳಲ್ಲಿ ಆಲೋಚನೆ ಮಾಡಿದಾಗ ಮಾತ್ರವೇ ಮೆದುಳು ಇನ್ನಷ್ಟು ತೀಕ್ಷ್ಣವಾಗಲು ಸಾಧ್ಯವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಇಂಜಿನಿಯರಿಂಗ್ ಸೇರಿದಂತೆ ಇನ್ನಿತರ ಪದವಿ ಪಡೆದಿದ್ದರೂ ಅವರು ಉದ್ಯೋಗಕ್ಕೆ ಇನ್ನೂ ಸಿದ್ಧರಾಗಿರುವುದಿಲ್ಲ. ಆದ್ದರಿಂದ ಕೌಶಲಾಭಿವೃದ್ಧಿ ಕಲಿಕೆ ಅತ್ಯಗತ್ಯವಾಗಿದೆ. ಇಂದು ಅಸಂಖ್ಯಾತ ಅವಕಾಶಗಳಿದ್ದರೂ ಸರಿಯಾದ ಕೆಲಸಕ್ಕೆ ಸರಿಯಾದ ವ್ಯಕ್ತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಚಿಂತನೆ ಮತ್ತು ಕಲಿಕೆ ಸಾರ್ವತ್ರಿಕವಾಗಿರಬೇಕು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿದರು. ಮೈಸೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಎಸ್.ಜೆ.ಮಂಜುನಾಥ್, ಇಎಂಆರ್‌ಸಿ ನಿವೃತ್ತ ನಿರ್ದೇಶಕ ಪ್ರೊ.ಎ.ಬಾಲಸುಬ್ರಹ್ಮಣಿಯನ್, ಇಎಂಆರ್‌ಸಿ ನಿರ್ದೇಶಕ ಡಾ.ಗಂಟಾ ರವಿಕುಮಾರ್, ಶಿವಶಂಕರ್ ಬೆಳ್ಳಿಯಪ್ಪ ಇತರರು ಇದ್ದರು.