ಖಾಸಗಿ ಕಾಮಗಾರಿಗೆ ಬಿಲ್ ಪಾವತಿಸಿದ ಗ್ರಾಪಂ

ಎಚ್.ಡಿ.ಕೋಟೆ ತಾಲ್ಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಮಳಿಗೆ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಚರಂಡಿ ಮತ್ತು ಡಕ್ ನಿರ್ಮಾಣ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಒ, ಗುತ್ತಿಗೆದಾರನ ವಿರುದ್ಧ ಆರೋಪ
  • ಹೊಮ್ಮರಗಳ್ಳಿ ಗ್ರಾಮದ ಕೋಳಿ ಸೋಮು ಆರೋಪ
ಎಚ್.ಡಿ.ಕೋಟೆ: ಮಳಿಗೆ ಮಾಲೀಕರು ತಮ್ಮ ಅಂಗಡಿ ಮುಂದೆ ಸ್ವಂತ ಖರ್ಚಿನಿಂದ ಮಾಡಿದ ಚರಂಡಿ ಮತ್ತು ಡೆಕ್ ಕಾಮಗಾರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗುತ್ತಿಗೆದಾರನಿಗೆ ಒಂದು ಲಕ್ಷ ರೂ.ಗಳಿಗೂ ಹೆಚ್ಚು ಬಿಲ್ ಪಾವತಿ ಮಾಡಿದ್ದಾರೆ ಎಂದು ಹೊಮ್ಮರಗಳ್ಳಿ ಗ್ರಾಮದ ಕೋಳಿ ಸೋಮು ಆರೋಪಿಸಿದ್ದಾರೆ.
ತಾಲೂಕಿನ ಹೊಮ್ಮರಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ವಾರ್ಡಿನ ರೇಖಾ ಅವರು ತಮ್ಮ ಮಳಿಗೆ ಮುಂಭಾಗ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಸ್ವಂತವಾಗಿ ಸುಮಾರು ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಚರಂಡಿ ಮತ್ತು ಡೆಕ್ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಸದಸ್ಯ ಮುರಳಿ ಪಿಡಿಒಗೆ ನಮ್ಮ ಕಡೆಯ ಗುತ್ತಿಗೆದಾರ ಕಾಮಗಾರಿ ಮಾಡಿದ್ದಾನೆ ಎಂದು ಪಂಚಾಯಿತಿ ಇಂಜಿನಿಯರ್ ಮೂಲಕ ವರದಿ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಕಾಮಗಾರಿ ನಡೆದಿದೆ ಎಂದು ಗುತ್ತಿಗೆದಾರನಿಗೆ ಪಿಡಿಒ ಗಣೇಶ್ ಹಣ ಪಾವತಿ ಮಾಡಿದ್ದಾರೆ ಎಂದು ದೂರಿದರು.
ಕಾಮಗಾರಿ ಪರಿಶೀಲನೆ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹತ್ತು ದಿನಗಳ ಹಿಂದೆ ನಾನು ದೂರು ನೀಡಿದಾಗ ಕಾಮಗಾರಿಯನ್ನು ಗುತ್ತಿಗೆದಾರ ಮಾಡಿಲ್ಲ ಎಂದು ಕಂಡುಬಂದರೆ ಬಿಲ್ ವಾಪಸ್ ಪಡೆಯುತ್ತೇನೆ ಎಂದು ಉಡಾಫೆ ಉತ್ತರ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ. ಹಾಗಾಗಿ ಕಾಮಗಾರಿ ನಡೆಯದೆ ಬಿಲ್ ಪಾವತಿ ಮಾಡಿರುವ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಪಡೆದಿರುವ ಗುತ್ತಿಗೆದಾರನ ಮೇಲೆ ಕಾನೂನು ಕ್ರಮ ಆಗಬೇಕು ಎಂದು ಪತ್ರಿಕೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಗುತ್ತಿಗೆದಾರ ಕಾಮಗಾರಿ ಮಾಡಿರುವ ಬಗ್ಗೆ ಪಂಚಾಯಿತಿಗೆ ಫೋಟೋ ದಾಖಲೆ ನೀಡಿದ್ದು, ಜತೆಗೆ ಇಂಜಿನಿಯರ್ ಕೂಡ ಕಾಮಗಾರಿ ನಡೆದಿರುವ ಬಗ್ಗೆ ವರದಿ ನೀಡಿದ ಆಧಾರದ ಮೇಲೆ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಲಾಗಿದೆ. ಮಳಿಗೆ ಮಾಲೀಕರು ಸ್ವಂತವಾಗಿ ಕಾಮಗಾರಿ ಮಾಡಿದ್ದೇವೆ ಎಂದು ಪಂಚಾಯಿತಿಗೆ ಅರ್ಜಿ ನೀಡಿದ್ದು ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net