ಸುತ್ತೂರು ಶ್ರೀಮಠದ ಗೋಶಾಲೆ ಜಾನುವಾರುಗಳ ಸದ್ಬಳಕೆ

ಗೋಶಾಲೆ ಜಾನುವಾರುಗಳ
ಗೋಶಾಲೆ ಜಾನುವಾರುಗಳ
Published on

ಪ್ರಮುಖ ಮುಖ್ಯಾಂಶಗಳು

  • ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಉತ್ತೇಜನ
  • ಶ್ರೀ ಶಿವರಾತ್ರೀಶ್ವರ ಗ್ರಾಮೀಣಾಭಿವೃದ್ಧಿ ಫೌಂಡೇಷನ್‌ನಿಂದ ವಿನೂತನ ಪರಿಕ್ರಮ
  • ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ
ಅವಿನಾಶ್ ಜೈನಹಳ್ಳಿ ಮೈಸೂರು
ಯಾವುದಕ್ಕೂ ಉಪಯೋಗವಿಲ್ಲದ ಹಸು ಎಂದು ಗೋಶಾಲೆಗೆ ತಂದು ಬಿಟ್ಟಿರುವ ಜಾನುವಾರುಗಳನ್ನೇ ಬಳಸಿಕೊಂಡು ಕೃಷಿಕರಿಗೆ ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಪ್ರೇರೇಪಣೆ ನೀಡುವ ಕೆಲಸವನ್ನು ಸುತ್ತೂರಿನ ಶ್ರೀಮಠದ ವತಿಯಿಂದ ನಡೆಯುತ್ತಿರುವ ಗೋಶಾಲೆಯಲ್ಲಿ ಮಾಡಲಾಗುತ್ತಿದೆ.
ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ಶ್ರೀ ಶಿವರಾತ್ರೀಶ್ವರ ಗ್ರಾಮೀಣಾಭಿವೃದ್ಧಿ ಫೌಂಡೇಷನ್‌ನಿಂದ ಸ್ಥಾಪನೆ ಮಾಡಲಾಗಿರುವ ಗೋಶಾಲೆಯಲ್ಲಿರುವ ದೇಸಿ ತಳಿಗಳನ್ನು ಬಳಕೆ ಮಾಡಿಕೊಂಡು ರೈತರಿಗೆ ನೈಸರ್ಗಿಕ ಹಾಗೂ ಸಾವಯವ ಕೃಷಿಯನ್ನು ಯಾವ ರೀತಿ ಮಾಡಬಹುದು ಎನ್ನುವುದು ಪ್ರಾತ್ಯಕ್ಷಿಕೆ ಮೂಲಕ ಪಾಠ ಹೇಳಿಕೊಡಲಾಗುತ್ತಿದೆ. ಜತೆಗೆ ಸ್ಥಳದಲ್ಲೇ ಪ್ರಯೋಗವನ್ನು ಮಾಡಲಾಗುತ್ತದೆ.
ಗೋಶಾಲೆಯಲ್ಲಿ ಅಮೃತ ಮಹಲ್, ಹಳ್ಳಿಕಾರ್, ಗಿರ್, ಮಲೆನಾಡು ಗಿಡ್ಡ ತಳಿಗಳು ಸೇರಿದಂತೆ ವಿವಿಧ ತಳಿಯ 85 ಹಸುಗಳು ಇವೆ. ವಯಸ್ಸಾಗಿರುವ, ಆನಾರೋಗ್ಯ ಪೀಡಿತವಾಗಿದ್ದ, ಅಂಗ ಊನವಾಗಿದ್ದ ಹಸುಗಳನ್ನು ಸಾಕಲು ಆಗದವರು ಗೋಶಾಲೆಗೆ ತಂದು ಬಿಟ್ಟಿದ್ದಾರೆ. ಕೆಲವು ಹಸುಗಳನ್ನು ದಾನಿಗಳು ನೀಡಿದ್ದಾರೆ. ಅವುಗಳನ್ನು ಸಂರಕ್ಷಣೆ ಮಾಡಿ, ಚಿಕಿತ್ಸೆ ನೀಡಿ, ಶಕ್ತಿಯುತವಾಗಿ ಮಾಡಿ ಉಪಯೋಗಕ್ಕೆ ಬರುವ ರೀತಿ ಮಾಡಲಾಗಿದೆ. ಈ ಹಸುಗಳೇ ಪ್ರಸ್ತುತ ಆರೋಗ್ಯಕರ ಬೇಸಾಯ ಕ್ರಮಕ್ಕೆ ರಾಯಭಾರಿಗಳಿವೆ.

ಜೀವಾಮೃತ

ನೈಸರ್ಗಿಕ ಮತ್ತು ಸಾವಯವ ಕೃಷಿ ಕೈಗೊಳ್ಳಲು ಮುಖ್ಯವಾಗಿ ದೇಸಿ ಹಸುವಿನ ಗಂಜಲದಿಂದ ತಯಾರು ಮಾಡಿರುವ ಜೀವಾಮೃತವನ್ನು ಬಳಕೆ ಮಾಡುತ್ತಾರೆ. ನೂರಾರು ಮೂಟೆ ರಸಗೊಬ್ಬರ ಬಳಸಿ, ರಾಸಾಯನಿಕ ಔಷಧಗಳನ್ನು ಸಿಂಪಡಣೆ ಮಾಡಿ ಬೆಳೆಗಳನ್ನು ಬೆಳೆಯುವುದಕ್ಕಿಂತ, ಕಡಿಮೆ ಖರ್ಚಿನಲ್ಲಿ, ರಾಸಾಯನಿಕಮುಕ್ತ ಬೆಳೆಯನ್ನು ಜೀವಾಮೃತದ ಮೂಲಕ ಬೆಳೆಯಬಹುದಾಗಿದೆ.
ಹೀಗಾಗಿ, ದೇಸಿ ತಳಿಗಳ ಹಸು ಮನೆಗೆ ಒಂದಿದ್ದರೂ ಸಾಕು, ಗೊಬ್ಬರ ಕೊಳ್ಳಲು ಸಾಲ ಮಾಡುವ ಪ್ರಮೇಯವೇ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಕೃಷಿ ವಿಜ್ಞ್ಞಾನ ಕೇಂದ್ರದಲ್ಲಿ ನೈಸರ್ಗಿಕ- ಸಾವಯವ ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡುವ ಸಮಯದಲ್ಲಿ ಗೋಶಾಲೆಯ ಹಸುಗಳಿಂದ ತಯಾರಿಸಿರುವ ಜೀವಾಮೃತ ಪ್ರಾತ್ಯಕ್ಷಿಕೆ ತೋರಿಸಲಾಗುತ್ತದೆ. ಈ ಹಸುಗಳ ಮಹತ್ವ, ಅವುಗಳ ಗುಣ-ಧರ್ಮವನ್ನು ತಿಳಿಸಿಕೊಡಲಾಗುತ್ತದೆ. ಈ ಹಸುಗಳ ಸಗಣಿ, ಅವುಗಳು ಉಳಿಸಿದ ಮೇವು, ತ್ಯಾಜ್ಯದಿಂದ ಎರೆಗೊಬ್ಬರ ತಯಾರು ಮಾಡಲಾಗುತ್ತಿದೆ. ವರ್ಷಕ್ಕೆ ನೂರು ಟನ್ ಗೊಬ್ಬರವನ್ನು ಉತ್ಪತ್ತಿ ಮಾಡಲಾಗುತ್ತಿದೆ. ಇದನ್ನು ರೈತರು ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಇದೆ. ಸದ್ಯ ಇನ್ನೂರು ಟನ್‌ಗಿಂತಲೂ ಅಧಿಕವಾಗಿ ಉತ್ಪಾದನೆ ಮಾಡಿದರೂ ಅದನ್ನು ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ ಕೃಷಿಕರು.
ಇದಲ್ಲದೇ ದೇಸಿ ಹಸುವಿನ ಹಾಲು, ಮೊಸರು, ತುಪ್ಪ ಕೂಡ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿರುವುದಿಂದ ಈ ತಳಿಗಳನ್ನು ಸಂರಕ್ಷಣೆ ಮಾಡಬೇಕು. ರೈತರು ಇವುಗಳನ್ನು ಹೆಚ್ಚಾಗಿ ಸಾಕಬೇಕು ಎನ್ನುವ ಜಾಗೃತಿಯನ್ನೂ ಈ ಮೂಲಕ ಶ್ರೀ ಶಿವರಾತ್ರೀಶ್ವರ ಗ್ರಾಮೀಣಾಭಿವೃದ್ಧಿ ಫೌಂಡೇಷನ್ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ.

ನೂರಾರು ರೈತರು ಸ್ಫೂರ್ತಿ

ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಸ್ಫೂರ್ತಿ ಪಡೆದ ನೂರಾರು ರೈತರು ಪ್ರಸ್ತುತ ನೈಸರ್ಗಿಕ ಕೃಷಿಯನ್ನು ಶುರು ಮಾಡಿದ್ದಾರೆ. ಕೆಲವರು ದೇಸಿ ತಳಿಯ ಹಸುಗಳನ್ನು ಮನೆಯಲ್ಲಿ ತಂದು ಕಟ್ಟಿಹಾಕಿದ್ದಾರೆ. ಹಸು ಇಲ್ಲದೇ ಇರುವವರು ಗೋಶಾಲೆಯ ಗೊಬ್ಬರವನ್ನು ಖರೀದಿಸಿ ಜಮೀನುಗಳಿಗೆ ಹಾಕುತ್ತಿದ್ದಾರೆ. ಇದಲ್ಲದೇ ನಗರ ಪ್ರದೇಶದಲ್ಲಿ ತಾರಸಿ ಮೇಲೆ ಕುಂಡಗಳಲ್ಲಿ ತರಕಾರಿ ಬೆಳೆಯುವವರಿಗಾಗಿಯೇ ಹತ್ತು ಕೆಜಿ ಪ್ರಮಾಣದ ಮೌಲ್ಯವರ್ಧಿತ ಎರೆಗೊಬ್ಬರವನ್ನು ವಿತರಣೆ ಮಾಡಲಾಗುತ್ತಿದೆ.

ವಿಭೂತಿ ತಯಾರಿಕೆ

ಗೋಶಾಲೆಯ ಹಸುಗಳ ಸಗಣಿಯಿಂದ ವಿಭೂತಿ ತಯಾರು ಮಾಡಲಾಗುತ್ತಿದೆ. ತಿಂಗಳಿಗೆ 250ಕ್ಕೂ ಹೆಚ್ಚು ವಿಭೂತಿ ಗಟ್ಟಿಯನ್ನು ಮಾಡಿ ಮಾರಾಟ ಮಾಡಲಾಗುತ್ತಿದೆ. ದೇಸಿ ಹಸುಗಳ ಸಗಣಿಯನ್ನು ಬೆರಣಿ ಮಾಡಿ, ನಂತರ ವಿಭೂತಿ ಮಾಡುವುದರಿಂದ ಇದಕ್ಕೆ ಭಕ್ತರು ಹೆಚ್ಚಿನ ಬೇಡಿಕೆಯನ್ನು ಇಟ್ಟಿದ್ದಾರೆ.

500 ಹಸುಗಳ ಸಾಕುವ ಆಲೋಚನೆ

ಸುತ್ತೂರಿನ ಗೋಶಾಲೆಯಲ್ಲಿ ಮುಂದಿನ ದಿನದಲ್ಲಿ 500ಕ್ಕೂ ಹೆಚ್ಚು ದೇಸಿ ಹಸುಗಳನ್ನು ಸಾಕುವ ಆಲೋಚನೆಯನ್ನು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಯೋಜನಾ ಕಾರ್ಯಗಳು ನಡೆಯುತ್ತಿವೆ. ದೇಸಿ ತಳಿಗಳನ್ನು ಸಾಕುವುದರಿಂದ ಆಗುವ ಲಾಭಗಳನ್ನು ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಪಶುಪಾಲನಾ ವಿಭಾಗದ ವೈದ್ಯರು ತಿಳಿಸಿಕೊಡುತ್ತಿದ್ದಾರೆ.
"

ದೇಸಿ ತಳಿಯ ಹಸುಗಳು ರೈತರಿಗೆ, ಸಾಕುವವರಿಗೆ ಬಹಳ ಉಪಯೋಗವಾಗಿವೆ. ಹಿಂದೆ ಪ್ರತಿ ಮನೆಯಲ್ಲೂ ದೇಸಿ ಹಸುಗಳೇ ಇದ್ದವು. ಈಗ ಅವುಗಳು ಬೆರಳೆಣಿಕೆ ಮಟ್ಟಕ್ಕೆ ಬಂದಿವೆ. ಹೀಗಾಗಿ, ಅವುಗಳ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ದೇಸಿ ತಳಿಗಳ ಸಂವರ್ಧನೆ ಮೂಲಕವಾಗಿ ಆರೋಗ್ಯಕರ ಜೀವನ ಮತ್ತು ರಾಸಾಯನಿಕ ಮುಕ್ತ ಕೃಷಿ ಚಟುವಟಿಕೆ ನಡೆಸಲು ಈಗಿನ ದಿನಮಾನದ ರೈತರಿಗೆ ತಿಳಿವಳಿಕೆಯನ್ನು ಮೂಡಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net