ನಗರದ ಮಹಾರಾಣಿ ಮಹಿಳಾ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಚ್.ಸಿ.ಮಹದೇವಪ್ಪ, ಕೆ.ಹರೀಶ್ ಗೌಡ, ಡಾ. ಕೆ.ಎಸ್.ಸದಾನಂದ, ಪ್ರೊ. ಡಿ.ಎಸ್.ಪ್ರತಿಭಾ, ಎಚ್. ಜನಾರ್ದನ್, ಪ್ರೊ. ಪಿ. ಶಿವಣ್ಣ, ಡಾ.ಎಸ್.ಮುತ್ತುರಾಜ್ ಇದ್ದರು.
ಹೆಣ್ಣು ಮಕ್ಕಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣವನ್ನು ಪಡೆದು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಮಹಾರಾಣಿ ಮಹಿಳಾ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ 2025-26 ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹಾನ್ ಚೇತನಗಳ ದೂರದೃಷ್ಟಿಯೇ ಮೂಲ ಕಾರಣ. ಅವರ ಕೊಡುಗೆಯಿಂದಾಗಿ ಇಂದು ಮೈಸೂರು ಮಾದರಿ ನಗರವಾಗಿ ಬೆಳೆದಿದೆ. ಇಂದು ನಾವು ಸ್ವತಂತ್ರವಾಗಿ ವ್ಯವಹರಿಸಲು ಮತ್ತು ಮಾತನಾಡಲು ಶಕ್ತಿ ನೀಡಿದವರು ಡಾ. ಬಿ.ಆರ್.ಅಂಬೇಡ್ಕರ್. ಅವರು ನಮಗೆ ನೀಡಿದ ಬೃಹತ್ ಸಂವಿಧಾನವೇ ನಮ್ಮೆಲ್ಲರ ಶಕ್ತಿ. ಇಂದು ಸರ್ವೋಚ್ಚ ನ್ಯಾಯಾಲಯದಿಂದ ಹಿಡಿದು ಸಾಮಾನ್ಯ ಮಠಗಳವರೆಗೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಂವಿಧಾನದ ಪ್ರಸ್ತಾವನೆಯನ್ನು ಓದುವುದು ಕಡ್ಡಾಯವಾಗಿದೆ. ಇದು ನಮ್ಮ ಸಂವಿಧಾನಕ್ಕಿರುವ ಅಪ್ರತಿಮ ಮೌಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪರವಾಗಿ ಮಾತ್ರವಲ್ಲದೆ, ಮಹಿಳೆಯರ ಮೇಲಿನ ಶೋಷಣೆಯ ವಿರುದ್ಧವೂ ನಿರಂತರವಾಗಿ ಹೋರಾಡಿದವರು. ಸತಿ ಪದ್ಧತಿಯಂತಹ ಕ್ರೂರ ಸಂಪ್ರದಾಯಗಳನ್ನು ವಿರೋಧಿಸಿ, ಮನುಸ್ಮೃತಿಯಲ್ಲಿದ್ದ ಅಸಮಾನತೆಯ ವ್ಯವಸ್ಥೆಗಳನ್ನು ಖಂಡಿಸಿದರು, ಮಹಿಳಾ ಶಿಕ್ಷಣ ಮತ್ತು ಹಕ್ಕುಗಳಿಗಾಗಿ ಪ್ರಬಲವಾಗಿ ಧ್ವನಿ ಎತ್ತಿದರು. ಇಂದು ಬಹುತೇಕ ಪರೀಕ್ಷೆಗಳ ಫಲಿತಾಂಶದಲ್ಲಿ ಹೆಣ್ಣುಮಕ್ಕಳು ಮೇಲುಗೈ ಸಾಧಿಸುತ್ತಿರುವುದಕ್ಕೆ ಮತ್ತು ಸಬಲೆಯರಾಗಿರುವುದಕ್ಕೆ ಅಂಬೇಡ್ಕರ್ ಅವರು ಅಂದು ನಡೆಸಿದ ಹೋರಾಟಗಳೇ ಕಾರಣ ಎಂದು ತಿಳಿಸಿದರು.
ಜಗತ್ತಿನಲ್ಲಿ ಯಾರೂ ಕದಿಯಲಾಗದ ಏಕೈಕ ಆಸ್ತಿ ಎಂದರೆ ಅದು ಶಿಕ್ಷಣ ಮಾತ್ರ. ಶಿಕ್ಷಣದ ಮೂಲಕ ಅಸಮಾನತೆಯನ್ನು ಹೋಗಲಾಡಿಸಿ, ಸಮಸಮಾಜವನ್ನು ನಿರ್ಮಿಸಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದ್ದರಿಂದ ಹೆಣ್ಣುಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಅವರು ಕರೆ ನೀಡಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿದರು. ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್.ಸದಾನಂದ, ಮೈಸೂರು ವಿಭಾಗದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಪ್ರೊ. ಡಿ.ಎಸ್.ಪ್ರತಿಭಾ, ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ದನ್, ಪ್ರಾಂಶುಪಾಲ ಪ್ರೊ. ಪಿ. ಶಿವಣ್ಣ, ಐಕ್ಯೂಎಸಿ ನ ಸಂಚಾಲಕ ಡಾ.ಎಸ್.ಮುತ್ತುರಾಜ್ ಇದ್ದರು.