ಶ್ರೀ ಕಂಠೇಶ್ವರಸ್ವಾಮಿ ಹಾಗೂ ಶ್ರೀ ಪಾರ್ವತಿ ಅಮ್ಮನವರಿಗೆ ಅಭಿಷೇಕ ಸೇರಿದಂತೆ ವಿಶೇಷವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಬಾಲಕಿಯರು ಕಪಿಲಾ ನದಿಯ ಘಟ್ಟದಲ್ಲಿ ಮಂಗಳ ಪೂಜೆಯೊಂದಿಗೆ ಕಳಸ ಕನ್ನಡಿ, ಮಂಗಳ ಸ್ನಾನ ನೆರವೇರಿಸಲಾಯಿತು. ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಸಂಜೆ ಕಾಶಿಯಾತ್ರೆ ಅಂಗವಾಗಿ ಉತ್ಸವಮೂರ್ತಿಗೆ ಹಸಿರು ಪಚ್ಚೆಹಾರ, ಮಹಾರಾಜರು ನೀಡಿದ ವಜ್ರ, ಮುತ್ತು,, ಚಿನ್ನದ ಆಭರಣಗಳು, ಜರಿ ವಸ್ತ್ರಗಳಿಂದ ಅಲಂಕಾರಿಸಿ, ಕಂಸಳೆ, ಡೋಲು ಕುಣಿತ ವೀರಗಾಸೆ, ಗಾಡಿ ಗೊಂಬೆ ಸೇರಿದಂತೆ ಕಲಾ ತಂಡಗಳೊಂದಿಗೆ ದೇವಾಲಯ ಸುತ್ತಲೂ ಪ್ರದಕ್ಷಿಣೆ ಮಾಡಲಾಯಿತು. ಸಂಜೆ 6.45ರಿಂದ 7.15ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕಲ್ಯಾಣ ಮಂಟಪ ಪ್ರವೇಶದ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.