ಬಿಡದಿ ಟೌನ್‌ಶಿಪ್ ಹೋರಾಟ ಜೆನ್-ಜಿ ಕೈಗೆತ್ತಿಕೊಳ್ಳಲಿ: ಸಾಹಿತಿ ದೇವನೂರ ಮಹದೇವ ಕರೆ

 ಬಿಡದಿ ಟೌನ್‌ಶಿಪ್ ಕುರಿತು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಲಾಯಿತು. ದೇವನೂರ ಮಹದೇವ, ಬಡಗಲಪುರ ನಾಗೇಂದ್ರ, ಎಸ್.ಆರ್.ಹಿರೇಮಠ, ಟಿ.ಯಶವಂತ ಇನ್ನಿತರರಿದ್ದರು.
ಬಿಡದಿ ಟೌನ್‌ಶಿಪ್ ಕುರಿತು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಲಾಯಿತು. ದೇವನೂರ ಮಹದೇವ, ಬಡಗಲಪುರ ನಾಗೇಂದ್ರ, ಎಸ್.ಆರ್.ಹಿರೇಮಠ, ಟಿ.ಯಶವಂತ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಡದಿ ಟೌನ್‌ಶಿಪ್ ಅನುಷ್ಠಾನಗೊಂಡರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಆರ್.ಅಶೋಕ ಮೂವರು ಸಮಾನ ಅಪರಾಧಿ
  • ಭೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದವರೆಗೆ ಪಾದಯಾತ್ರೆ

ಮೈಸೂರು: 

ಬಿಡದಿ ಟೌನ್‌ಶಿಪ್ ಹೋರಾಟವನ್ನು ಜೆನ್-ಜಿ ತಲೆಮಾರಿನವರು ಕೈಗೆತ್ತಿಕೊಳ್ಳಬೇಕು. ನಾವು ಅವರನ್ನು ಹಿಂಬಾಲಿಸುತ್ತೇವೆ ಎಂದು ಹಿರಿಯ ಸಾಹಿತಿ ದೇವನೂರ ಮಹದೇವ ಹೇಳಿದರು.

ಹೊಸ ಜನಾಂಗ ಜೆನ್-ಜಿ ಈಗ ಆ್ಯಕ್ಟಿವ್ ಆಗಿದ್ದು, ಅವರು ಹೋರಾಟಕ್ಕೆ ಬರಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕರೆಕೊಟ್ಟರು.
ಬಿಡದಿ ಟೌನ್‌ಶಿಪ್ ಅನುಷ್ಠಾನಗೊಂಡರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಆರ್.ಅಶೋಕ ಮೂವರು ಸಮಾನ ಅಪರಾಧಿಗಳಾಗುತ್ತಾರೆ. ಈ ಹೋರಾಟದ ನಾಯಕರ ಕಣ್ಣೀರು ಸುಳ್ಳು ಮತ್ತು ಕ್ರೂರ. ಇದು ಭಾರತ ಮತ್ತು ಕರ್ನಾಟಕದ ದುರಂತ ಎಂದು ಕಳವಳ ವ್ಯಕ್ತಪಡಿಸಿದರು. 
ಟೌನ್‌ಶಿಪ್‌ಗೆ ಜನರ ವಿರೋಧ ಇದೆ. ಸರ್ಕಾರ ಶೇ.80 ಜನರು ಭೂಮಿ ಕೊಡುತ್ತಾರೆ ಎನ್ನುತ್ತದೆ. ಹೋರಾಟನಿರತ ರೈತರು ಶೇ.80 ಜನರು ಭೂಮಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಭೂಮಿ ತೆಗೆದುಕೊಂಡು ಏನು ಮಾಡುತ್ತೀರಿ? ಎಂದು ಮಹಾದೇವ ಪ್ರಶ್ನಿಸಿದರು.
ಪ್ರಭುತ್ವಕ್ಕೆ ಭೂಮಿ ಉಳಿಸಿಕೊಳ್ಳುವ ಆಕಾಂಕ್ಷೆ ಇಲ್ಲದಿದ್ದರೆ ಹೆಂಗೆ? ಎಲ್ಲ ರೈತರು ಭೂಮಿ ಕೊಟ್ಟರೆ ವ್ಯವಸಾಯ ಮಾಡುವವರು ಯಾರು? ಸರ್ಕಾರ ಎಲ್ಲರಿಗೂ ಕೆಲಸ ಕೊಡುತ್ತದೆಯೇ? ಜೀವನಕ್ಕೆ ಆಧಾರ ಕೊಡುತ್ತೀರಾ? ಗುಳೇ ಹೋಗುವುದನ್ನು ತಪ್ಪಿಸುತ್ತೀರಾ? ಹಳ್ಳಿಗಳಿಂದ ನಗರಕ್ಕೆ ಬಂದ ರೈತರು ಸ್ಲಂ ಸೇರುತ್ತಿದ್ದಾರೆ. ಈ ಬಗ್ಗೆ ಯೋಚನೆ ಮಾಡಬೇಡವೇ ಎಂದು ಪ್ರಶ್ನಿಸಿದರು.

ಭೈರಮಂಗಲದಿಂದ ಪಾದಯಾತ್ರೆ: 

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ನಾಲ್ವರ ಸಮಿತಿ ತಂಡ ಸಿದ್ಧಪಡಿಸಿದ ವರದಿಯನ್ನು ಸಲ್ಲಿಸಲಾಗಿದೆ.
ವರದಿಯಲ್ಲಿ ಬಿಡದಿ ಟೌನ್‌ಶಿಪ್‌ಗೆ ಕಾನೂನು ಮಾನ್ಯತೆ ಇಲ್ಲ. ಸಮಾಜದ ಮೇಲೆ ಬೀರುವ ಪರಿಣಾಮ ಪರಿಗಣಿಸಿಲ್ಲ. ಪರಿಸರಕ್ಕೆ ವ್ಯತಿರಿಕ್ತವಾಗಿದ್ದು ಅನುಷ್ಠಾನಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಭೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ  ಹೋರಾಟಗಾರರ ಉದ್ಯಾನದವರೆಗೆ ಶೀಘ್ರದಲ್ಲೇ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ನಾಡಿನಾದ್ಯಂತ ರೈತರು, ದಲಿತರು ಭಾಗವಹಿಸುತ್ತಾರೆ ಎಂದರು.

ಸಿಎಂ ಕಚೇರಿಯೇ ರಿಯಲ್ ಎಸ್ಟೇಟ್ ಕಚೇರಿ:

ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಚೇರಿಯನ್ನು ರಿಯಲ್ ಎಸ್ಟೇಟ್ ಕಚೇರಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ದುರ್ಬಳಕೆ ಕೂಡಲೇ ನಿಲ್ಲಿಸಬೇಕು. ಬಿಡದಿ ಟೌನ್‌ಶಿಪ್‌ನಲ್ಲಿ ಸುಪ್ರೀಂ ಮತ್ತು ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಟೌನ್‌ಶಿಪ್ ದುರುದ್ದೇಶದ ಯೋಜನೆ. ಕಾರ್ಪೋರೇಟ್ ಹಿತಾಸಕ್ತಿ, ಭೂ ಕಬಳಿಕೆ ಹಿತವಿದ್ದು, ಅಭಿವೃದ್ಧಿ ಇಲ್ಲ. ಗೂಂಡಾ ಪ್ರವೃತ್ತಿಯ ಮೂಲಕ ರೈತರನ್ನು ಬೆದರಿಸಿ ಭೂಮಿ ಕಿತ್ತುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಯೋಜನೆ ವಾಪಸ್‌ಗೆ ಆಗ್ರಹ: 

ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಮಾತನಾಡಿ, ರಾಜಕೀಯ ಸಂಘರ್ಷದಿಂದ ರೈತರ ಸಮಸ್ಯೆ ಮರೆಮಾಚಿದೆ. ಸರ್ಕಾರಕ್ಕೂ ಜನರ ಹಿತ ಇಲ್ಲ. ಕಾನೂನು ಮಾನ್ಯತೆ ಇಲ್ಲದ ಈ ಯೋಜನೆಯನ್ನು ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಜನಾಂದೋಲನ ಮಹಾಮೈತ್ರಿ ಕೆ.ವಿ.ಭಟ್, ರೈತ ಸಂಘದ ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ದಸಂಸ ಸಂಚಾಲಕ ಶಂಭುಲಿಂಗಸ್ವಾಮಿ, ವಕೀಲ ಎನ್.ಪುನೀತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net