ಹಣಕ್ಕಿಂತ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ

ಕಂಪಲಾಪುರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ರವಿ, ಪಿ.ಪಿ.ಲತಾ, ನಾಗಶೆಟ್ಟಿ, ಕೆ.ಎಂ.ಲಕ್ಷ್ಮಣ್, ಕಟ್ಟೆ ಜಯಣ್ಣ ಇತರರು ಇದ್ದರು.
ಕಂಪಲಾಪುರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ರವಿ, ಪಿ.ಪಿ.ಲತಾ, ನಾಗಶೆಟ್ಟಿ, ಕೆ.ಎಂ.ಲಕ್ಷ್ಮಣ್, ಕಟ್ಟೆ ಜಯಣ್ಣ ಇತರರು ಇದ್ದರು.
Published on

ಕಂಪಲಾಪುರ:

ಆರೋಗ್ಯಕ್ಕಿಂತ ಹಣವೇ ಮುಖ್ಯವಲ್ಲ. ಉತ್ತಮ ಆರೋಗ್ಯವಿದ್ದರೆ ಅದೇ ಸಂಪತ್ತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರವಿ ಕಿವಿಮಾತು ಹೇಳಿದರು.

ಇಲ್ಲಿನ ಕರಕಂಟೇಶ್ವರ ದೇವಾಲಯದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನವಿಕಾಸ ಕೇಂದ್ರ, ಎಎಸ್‌ಸಿ ಕಣ್ಣಿನ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿದೆ. ರಾಸಾಯನಿಕ ಯುಕ್ತ ಪದಾರ್ಥಗಳ ಸೇವನೆ, ವಿಟಮಿನ್ ಕೊರತೆಯ ಕಾರಣ ಅನಾರೋಗ್ಯ ಹೆಚ್ಚು ಕಾಡುತ್ತಿದೆ. ಆದ್ದರಿಂದ ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒತ್ತಡದ ಜೀವನದಿಂದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಕಡೆ ನಿರ್ಲಕ್ಷ ವಹಿಸುತ್ತಿರುವುದು ಸಾಮಾನ್ಯವಾಗಿದೆ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬುದನ್ನು ಅರಿಯಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತಿದ್ದು ಜಾಗೃತರಾಗಬೇಕಿದೆ. ತಪ್ಪು ತಿಳವಳಿಕೆಯಿಂದ ವೈದ್ಯರ ಸಲಹೆ ಪಡೆಯದೆ ಹಿಂದೇಟು ಹಾಕುತ್ತಿರುವುದರಿಂದ ರೋಗಗಳು ಹೆಚ್ಚು ಉಲ್ಬಣಗೊಳ್ಳುತ್ತವೆ. ಆದ್ದರಿಂದ ಏನೇ ಆರೋಗ್ಯ ಸಮಸ್ಯೆ ಇದ್ದರೂ ಸಂಕೋಚ ಪಡದೆ ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ತಿಳಿಸಿದರು.
14ರಿಂದ 15ನೇ ವಯಸ್ಸಿನ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಇದು ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣ ಮಾಡುತ್ತದೆ. ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಜಂಕ್ ಫುಡ್, ಟೆಸ್ಟಿಂಗ್ ಪೌಡರ್ ಹಾಕಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದಾಗ ರೋಗಗಳಿಗೆ ನಾವೇ ನಮ್ಮ ಮಕ್ಕಳನ್ನು ದೂಡಿದಂತಾಗುತ್ತದೆ. ಹೀಗಾಗಿ ಮಕ್ಕಳ ಆರೋಗ್ಯ ಬಗ್ಗೆ ಪಾಲಕರು ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ನಾಗಶೆಟ್ಟಿ, ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಲಕ್ಷ್ಮಣ್, ಮಾಜಿ ಅಧ್ಯಕ್ಷ ಕಟ್ಟೆ ಜಯಣ್ಣ, ಗ್ರಾಪಂ ಮಾಜಿ ಅಧ್ಯಕ್ಷೆ ರಾಣಿ, ಗೀತಾ, ಮೈಸೂರಿನ ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ಡಾ.ಪಲ್ಲವಿ, ಮ್ಯಾನೇಜರ್ ಪಾಷಾ, ತಾಲೂಕು ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸರಿತಾ, ಮೇಲ್ವಿಚಾರಕಿ ಮಮತಾ, ಆರೋಗ್ಯ ಇಲಾಖೆಯ ಸುವರ್ಣ , ರವಿಕಿರಣ್, ಸೌಮ್ಯಾ, ಒಕ್ಕೂಟದ ಅಧ್ಯಕ್ಷೆ ತೇಜಾವತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net