ಪ್ರೋತ್ಸಾಹವಿಲ್ಲದೆ ಕಳೆಗುಂದಿದ ಫುಟ್ಬಾಲ್

ಇತಿಹಾಸದಲ್ಲಿ ಮಿಂಚಿದ್ದ ಮೈಸೂರಿನ ಪ್ರತಿಭಾವಂತ ಆಟಗಾರರ ತಂಡ
ಇತಿಹಾಸದಲ್ಲಿ ಮಿಂಚಿದ್ದ ಮೈಸೂರಿನ ಪ್ರತಿಭಾವಂತ ಆಟಗಾರರ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಇತಿಹಾಸದಲ್ಲಿ ಮಿಂಚಿದ್ದ ಮೈಸೂರಿನ ಪ್ರತಿಭಾವಂತ ಆಟಗಾರರ ತಂಡ
  • ರಾಜ್ಯದಲ್ಲೇ ಮೊದಲ ಅಸೋಸಿಯೇಷನ್ ಆರಂಭಿಸಿದ್ದ ಹೆಗ್ಗಳಿಕೆ
ಅವಿನಾಶ್ ಜೈನಹಳ್ಳಿ ಮೈಸೂರು
ಈಗ ಎಲ್ಲಿ ನೋಡಿದರೂ ಫಿಫಾ ವಿಶ್ವಕಪ್ ಹವಾ ಜೋರಾಗಿದೆ. ಎಲ್ಲರಲ್ಲೂ ಫುಟ್ಬಾಲ್ ಮೇಲಿನ ಪ್ರೀತಿ, ಅಭಿಮಾನ ಮನೆಮಾಡಿದೆ. ಆದರೆ, ಫಿಫಾ ವಿಶ್ವಕಪ್‌ನಲ್ಲಿ ಭಾಗಿಯಾಗುವಂತಹ ಬಲಿಷ್ಠ ತಂಡ ನಮ್ಮಲ್ಲಿ ಏಕೆ ಇಲ್ಲ ಎಂಬ ಕೊರಗೂ ಇದೆ...!
ಹೌದು...ರಾಜ್ಯದಲ್ಲೇ ಮೊದಲ ಫುಟ್ಬಾಲ್ ಅಸೋಸಿಯೇಷನ್ ಆರಂಭಿಸಿದ್ದ ಹೆಗ್ಗಳಿಕೆ ಹೊಂದಿರುವ ಮೈಸೂರಿನಲ್ಲೇ ಪ್ರೋತ್ಸಾಹವಿಲ್ಲದೆ ಫುಟ್ಬಾಲ್ ಆಟ ಸೊರಗುತ್ತಿದೆ. 80ರ ದಶಕದವರೆಗೂ ದೇಶದ ಫುಟ್ಬಾಲ್ ಇತಿಹಾಸದಲ್ಲಿ ರಾಜ್ಯ ಫುಟ್ಬಾಲ್ ತಂಡವನ್ನು ಮಿಂಚಿಸಿ, ಛಾಪು ಮೂಡಿಸಿದ್ದ ಮೈಸೂರು ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ಈಗ ಪ್ರತಿಭಾನ್ವಿತ ಆಟಗಾರರಿದ್ದರೂ ಪ್ರೋತ್ಸಾಹದ ಕೊರತೆ ಎದುರಾಗಿದೆ. ಕುಸ್ತಿಯಷ್ಟೇ, ಫುಟ್ಬಾಲ್‌ನಲ್ಲೂ ಮೈಸೂರು ಹೆಸರುವಾಸಿಯಾಗಿತ್ತು. ರಸ್ತೆಗೊಂದು ಗರಡಿ, ಮನೆಗೊಬ್ಬ ಪೈಲ್ವಾನನನ್ನು ಹೊಂದಿದ್ದ ಮೈಸೂರಿನಲ್ಲಿ ದಶಕಗಳ ಹಿಂದೆ ರಸ್ತೆಗೊಬ್ಬ ಫುಟ್ಬಾಲ್ ಆಟಗಾರರಿದ್ದರು.
ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೋತ್ಸಾಹದ ಕೊರತೆಯಿಂದ ಇಡೀ ಚಿತ್ರಣವೇ ಬದಲಾಗಿದೆ. ಫುಟ್ಬಾಲ್ ಅಸೋಸಿಯೇಷನ್‌ಗೆ ಸ್ವಂತ ಮೈದಾನ ಇಲ್ಲದೆ, ಮೈಸೂರು ವಿವಿ ಫುಟ್ಬಾಲ್ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಬೇಕಾಗಿದೆ. ಆಟಗಾರರು ಖಾಲಿ ಜಾಗಗಳಲ್ಲಿ ಅಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕ್ರೀಡಾ ಇಲಾಖೆಯಿಂದ ಫುಟ್ಬಾಲ್ ಮೈದಾನ ಮಾಡಲು ಮುಂದಾಗಿದ್ದ ಸ್ಥಳದ ವ್ಯಾಜ್ಯ ಈಗ ಹೈ ಕೋರ್ಟ್‌ನಲ್ಲಿದೆ.
ಇತರ ಕ್ರೀಡೆಗಳಿಗೆ ನೀಡಿದಷ್ಟು ಪ್ರೋತ್ಸಾಹವನ್ನು ಫುಟ್ಬಾಲ್‌ಗೂ ನೀಡಿದ್ದರೆ ಇಂದು ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಭಾರತ ತಂಡವೂ ಭಾಗವಹಿಸುವ ಅವಕಾಶ ಪಡೆಯುತ್ತಿತ್ತು. ಆ ತಂಡದಲ್ಲಿ ಮೈಸೂರಿನ ಪ್ರತಿಭೆಗಳೂ ಸ್ಥಾನ ಪಡೆಯುತ್ತಿದ್ದರು. ಆದ್ದರಿಂದ ಇತರ ಕ್ರೀಡೆಗಳಂತೆ ಫುಟ್ಬಾಲ್‌ಗೂ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎನ್ನುವುದು ಫುಟ್ಬಾಲ್ ಪ್ರೇಮಿಗಳ ಒತ್ತಾಯ.

50ಕ್ಕೂ ಹೆಚ್ಚು ತಂಡಗಳಿದ್ದವು:

ಕಳೆದ 1906ರಲ್ಲಿ ಜನ್ಮ ತಾಳಿದ ಮೈಸೂರು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ರಾಜ್ಯದ ಮೊದಲ ಫುಟ್ಬಾಲ್ ಸಂಸ್ಥೆೆ. ರಾಜ್ಯದ ಫುಟ್ಬಾಲ್ ಸಂಸ್ಥೆ ಹುಟ್ಟಿದ್ದೂ ಮೈಸೂರಿನಲ್ಲೇ ಎಂಬುದು ಹೆಮ್ಮೆ ಮೂಡಿಸುತ್ತದೆ. ಹಿಂದೆ ಅಸೋಸಿಯೇಷನ್ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚಿನ ತಂಡಗಳಿದ್ದವು. ಸಾವಿರಾರು ಕ್ರೀಡಾಪಟುಗಳಿದ್ದರು.
ಮೈಸೂರು ಬ್ಲೂಸ್, ಚಾಲೆಂಜ್ ಯೂನಿಯನ್, ಕೆ.ಆರ್.ಮಿಲ್ಸ್, ರೈಲ್ವೆ ವರ್ಕ್‌ಶಾಪ್, ಐಡಿಯಲ್ ಜಾವಾ ಉತ್ತಮ ಆಟಗಾರರನ್ನು ಹೊಂದಿದ ಕ್ಲಬ್‌ಗಳಾಗಿದ್ದವು. ಈಗ ಬೆರಳೆಣಿಕೆಯ ಕ್ಲಬ್‌ಗಳು ಮಾತ್ರ ಇವೆ. ರಾಯಲ್, ದುರ್ಗಾಂಬ, ಗವರ್ನಮೆಂಟ್ ಪ್ರೆಸ್, ಗಣೇಶ್, ಅಶೋಕ, ಪೊಲೀಸ್, ಕೆ.ಆರ್.ಮಿಲ್ಸ್, ಸೋನಿಯಾ, ಮುಸ್ಲಿಮ್ಸ್ ಮತ್ತು ಪೋಪ್ಸ್, ರೈಲ್ವೆ ನಾರ್ಥ್, ರೈಲ್ವೆ ಸೌತ್ ಸೇರಿ ಕೆಲ ತಂಡಗಳಿವೆ.
ದೊಡ್ಡಕೆರೆ ಮೈದಾನದಲ್ಲಿ ನಡೆಯುತ್ತಿದ್ದ ಪಂದ್ಯ:
ದೊಡ್ಡಕೆರೆ ಮೈದಾನದಲ್ಲಿ ಪ್ರತಿವರ್ಷ ರಾಜವಂಶಸ್ಥರ ನೆರವಿನಿಂದ ‘ಪ್ರಿನ್ಸಸ್ ಬರ್ತ್‌ಡೇ’ ಟೂರ್ನಮೆಂಟ್, ಗಣೇಶ ಬೀಡಿ ಮಾಲೀಕರ ಟೂರ್ನಮೆಂಟ್, ಮಾಯಣ್ಣ ಮೆಮೋರಿಯಲ್ ಕಪ್ ಟೂರ್ನಮೆಂಟ್, ಜಿಲ್ಲಾ ಸಂಸ್ಥೆಯ ಜಿಲ್ಲಾ ಲೀಗ್, ದಸರಾ ಫುಟ್ಬಾಲ್ ಟೂರ್ನಿ... ಹೀಗೆ ವರ್ಷಪೂರ್ತಿ ಒಂದಲ್ಲ ಒಂದು ಟೂರ್ನಿ ನಡೆಯುತ್ತಿದ್ದವು. ಆದರೆ ಈಗ ಅಸೋಸಿಯೇಷನ್ ವರ್ಷದಲ್ಲಿ ಕೆಲ ಟೂರ್ನಿಗಳನ್ನು ಮಾತ್ರ ಆಯೋಜಿಸುತ್ತಿದೆ. ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮೈಸೂರು ವಿವಿ ಫುಟ್ಬಾಲ್ ಮೈದಾನದಲ್ಲಿ ದಸರಾ ನಂತರ ಗೋವಿಂದರಾಜು ಮೆಮೋರಿಯಲ್ ಟ್ರೋಫಿ ಪಂದ್ಯಾವಳಿ ಆಯೋಜಿಸಲಿದೆ.

ಪ್ರತಿಭಾನ್ವಿತ ಆಟಗಾರರಿದ್ದರು:

ಜಾವ ಮೋಟಾರ್, ಕೆ.ಆರ್.ಮಿಲ್ಸ್, ರೈಲ್ವೇಸ್ ಸೇರಿದಂತೆ ಇತರ ಇಲಾಖೆ/ಕಾರ್ಖಾನೆಗಳಲ್ಲಿ ಫುಟ್ಬಾಲ್ ಆಟಗಾರರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಿ, ತಂಡಗಳನ್ನು ರಚಿಸಲಾಗುತ್ತಿತ್ತು. ಮೈಸೂರಿನಲ್ಲಿ ಫುಟ್ಬಾಲ್ ಬೆಳವಣಿಗೆಗೆ ಕೃಷ್ಣರಾವ್, ಶ್ರೀನಿವಾಸ ಅಯ್ಯಂಗಾರ್ ಶ್ರಮಸಿದ್ದಾರೆ. ಕೃಷ್ಣರಾವ್ ಫುಟ್ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿ ಅಪಾರ ಪ್ರಮಾಣದಲ್ಲಿ ದುಡಿದಿದ್ದಾರೆ.
ಮೈಸೂರಿನ ವರ್ಧರಾಜನ್ ಭಾರತದ ಪರ ಒಂದು ಬಾರಿ ಒಲಿಂಪಿಕ್‌ನಲ್ಲಿ ಫುಟ್ಬಾಲ್ ಆಡಿದ್ದಾರೆ. ಶಂಕರ್‌ಸಿಂಗ್, ಬಸವಣ್ಣ, ಷಣ್ಮುಗಂ ದೇಶದ ಪ್ರಮುಖ ಆಟಗಾರರಾಗಿದ್ದರು. ಇವರು ಮೈಸೂರು ರಾಜ್ಯದ ಪರ ಮತ್ತು ಇಂಡಿಯನ್ ರೈಲ್ವೆ ಪರ ಆಡಿದ್ದರು. ಕೊರಿಯಾದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೋಲ್‌ಕೀಪರ್ ಆಗಿ ಭಾರತ ತಂಡದಲ್ಲಿದ್ದ ನರಸಿಂಹಯ್ಯ ಮೈಸೂರಿನವರು. ಪ್ರಸ್ತುತವೂ ಅನೇಕ ಪ್ರತಿಭಾನ್ವಿತ ಆಟಗಾರರು ಮೈಸೂರಿನಲ್ಲಿದ್ದು, ಪ್ರೋತ್ಸಾಹದ ಕೊರತೆ ಎದುರಿಸುತ್ತಿದ್ದಾರೆ.

ಸೋದರರ ಕಮಾಲ್:

ಮೈಸೂರು ಫುಟ್ಬಾಲ್ ಕ್ರೀಡೆಯ ವೈಭವದ ದಿನಗಳಲ್ಲಿ ಸೋದರರಾದ ಎನ್.ರಾಮಣ್ಣ, ಎನ್.ರಾಜಣ್ಣ ಮತ್ತು ಎನ್.ಪಾಪಣ್ಣ (ಚಿನ್ನಸ್ವಾಮಿ) ಮಿಂಚು ಹರಿಸಿದ್ದರು. 1956ರಿಂದ ಎರಡು ದಶಕಗಳ ಕಾಲ ಮೈಸೂರು ಫುಟ್ಬಾಲ್ ಅಂಗಳದತ್ತ ಇಣುಕು ನೋಟ ಬೀರಿದರೆ, ಮೂವರು ಸಹೋದರರ ಸಾಧನೆ ಬೆರಗು ಮೂಡಿಸುತ್ತದೆ.
ಕೋಲ್ಕತದ ಪ್ರತಿಷ್ಠಿತ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ಗೆ ಈ ಮೂವರು ಆಡಿದ್ದರು. ರಾಜಣ್ಣ 1962ರಲ್ಲಿಯೇ ಈಸ್ಟ್ ಬೆಂಗಾಲ್ ತಂಡಕ್ಕೆ ಆಡಲು ಆಹ್ವಾನಿತರಾಗಿ ಹೋಗಿದ್ದರು. ಬಳಿಕ ಈ ಮೂವರು 1965ರಿಂದ 1969ರ ವರೆಗೆ ಮೊಹಮ್ಮಡನ್ ಸ್ಪೋರ್ಟಿಂಗ್ ಆಡಿದ್ದಾರೆ. ಎನ್.ಪಾಪಣ್ಣ 1968ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಕೌಲಾಲಂಪುರದಲ್ಲಿ ನಡೆದ ಮರ್ಡೇಕಾ ಟೂರ್ನಿಯಲ್ಲಿ ಆಡಿದ್ದರು.

ಕ್ರಾಫರ್ಡ್ ಭವನವೇ ಗ್ರೌಂಡ್!:

ಮೈಸೂರಿನಲ್ಲಿ ಫುಟ್ಬಾಲ್ ಅಸೋಸಿಯೇಷನ್ ಪ್ರಾರಂಭಿಸುವುದಕ್ಕೂ ಮೊದಲು ಮೈಸೂರು ವಿವಿಯ ಈಗಿನ ಕ್ರಾಫರ್ಡ್ ಭವನದ ಸ್ಥಳದಲ್ಲಿ ಫುಟ್ಬಾಲ್ ಅಭ್ಯಾಸ ಮಾಡಲಾಗುತ್ತಿತ್ತು. ಫುಟ್ಬಾಲ್ ಅಸೋಸಿಯೇಷನ್ ಪ್ರಾರಂಭಿಸಿದ ನಂತರ ಮೈಸೂರು ಮಹಾರಾಜರು ಫುಟ್ಬಾಲ್ ಆಟಕ್ಕೆ ದೊಡ್ಡಕೆರೆ ಮೈದಾನದಲ್ಲಿ ಆಡಲು ವ್ಯವಸ್ಥೆ ಕಲ್ಪಿಸಿದರು.
ಮೈಸೂರು ಫುಟ್ಬಾಲ್ ಇತಿಹಾಸದ ರೋಚಕತೆ ಇರುವುದೇ ದೊಡ್ಡಕೆರೆ ಮೈದಾನದಲ್ಲಿ. ದೇಶದ ಪ್ರಮುಖ ಪಂದ್ಯಾವಳಿಗಳು ಇಲ್ಲಿ ನಡೆದಿವೆ. ಫುಟ್ಬಾಲ್ ಅಸೋಸಿಯೇಷ್ ವತಿಯಿಂದ ವರ್ಷವಿಡೀ ಒಂದಿಲ್ಲೊಂದು ಪಂದ್ಯಾವಳಿ ನಡೆಸಿ ಅನೇಕ ಆಟಗಾರರ ಹುಟ್ಟಿಗೆ ಮತ್ತು ಪ್ರತಿಭೆ ಪ್ರದರ್ಶನಕ್ಕೆ ಕಾರಣವಾಗಿತ್ತು.
"

ಪ್ರಸ್ತುತ ಎಲ್ಲರೂ ಫಿಫಾ ವಿಶ್ವಕಪ್ ಕಪ್ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮಲ್ಲಿ ಫುಟ್ಬಾಲ್ ಪ್ರತಿಭೆಗಳಿಗೆ ಅವಕಾಶ ನೀಡಿದ್ದರೆ ನಮ್ಮ ತಂಡವೂ ಫಿಫಾದಲ್ಲಿ ಆಡುತ್ತಿತ್ತು. ಆದರೆ, ನಮ್ಮಲ್ಲಿ ಪ್ರೋತ್ಸಾಹದ ಕೊರತೆ ಇದೆ. ಹಿಂದೆ ಯಾವುದೇ ಪಂದ್ಯ ನಡೆದರೂ ದೊಡ್ಡಕೆರೆ ಮೈದಾನದಲ್ಲಿ ಫುಟ್ಬಾಲ್‌ಗೆ ನೂರಾರು ಜನರು ಸೇರುತ್ತಿದ್ದರು. ಆದರೆ, ಈಗ ಮೈಸೂರಿನಲ್ಲಿ ಫುಟ್ಬಾಲ್ ಮೈದಾನವೇ ಇಲ್ಲದಂತಾಗಿದೆ. ಸಣಪುಟ್ಟ ಟೂರ್ನಿಗಳು ಸದ್ದಿಲ್ಲದೆ ನಡೆದುಹೋಗುತ್ತವೆ. ಪ್ರೋತ್ಸಾಹ ಇಲ್ಲದ ಕಾರಣ ಜಿಲ್ಲೆಯಲ್ಲಿ ಫುಟ್ಬಾಲ್ ನೆಲಕಚ್ಚಿದೆ. ಮೈಸೂರು ವಿವಿಯ ಫುಟ್ಬಾಲ್ ಮೈದಾನದಲ್ಲಿ ಟೂರ್ನಿ ಆಯೋಜಿಸಲು ಹಣ ನೀಡಬೇಕಾದ ಪರಿಸ್ಥಿತಿ ಬಂದಿದೆ.

— ಮಂಜುನಾಥ್ ಕಾರ್ಯದರ್ಶಿ, ಫುಟ್ಬಾಲ್ ಅಸೋಸಿಯೇಷನ್, ಮೈಸೂರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net