ಉದ್ಯಮ ಸ್ಥಾಪಿಸುವ ಕಡೆ ಗಮನಹರಿಸಿ

Focus on starting a business
Focus on starting a business
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಟಿ.ದೇವೇಗೌಡ ಸಲಹೆ
  • ಸಾಮೂಹಿಕ ಸತ್ಯನಾರಾಯಣ ಪೂಜೆ
ಮೈಸೂರು: ಪ್ರಸ್ತುತ ದಿನದಲ್ಲಿ ಅನ್ನ ಕೊಡುವ ಭೂಮಿಯನ್ನು ಉಳಿಸಿಕೊಳ್ಳುವ ಬದಲು ದುಂದು ವೆಚ್ಚ ಮಾಡಲು ಮಾರಾಟ ಮಾಡಿಕೊಳ್ಳುವುದರಿಂದ ಕೃಷಿ ಭೂಮಿ ಇಳಿಕೆಯಾಗಿ ಕೃಷಿ ಚಟುವಟಿಕೆ ಕೂಡ ಕಡಿಮೆಯಾಗಿದೆ. ಹಾಗಾಗಿ, ಹೊಸ ಗುಡಿ ಕೈಗಾರಿಕೆಗಳು, ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ಕೊಡುವಂತೆ ಮಾಡಬೇಕಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸರಸ್ವತಿಪುರಂ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಶನಿವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ 40-50 ವರ್ಷಗಳ ಹಿಂದೆ ಪಡುವಾರಹಳ್ಳಿ, ಒಂಟಿಕೊಪ್ಪಲು, ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲಿನ ಭಾಗದವರು ಸಾಕಷ್ಟು ಜಮೀನು ಹೊಂದಿದ್ದರು. ಕಾಲಕ್ರಮೇಣ ಜಮೀನು ಮಾರಾಟ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಜಮೀನ್ದಾರರಾಗಿದ್ದವರು ಇಂದು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಒಂದು ಮನೆಯನ್ನು ಕಟ್ಟಿಕೊಳ್ಳಲು ನಿವೇಶನ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸಿದರು.
ಪ್ರತಿಯೊಬ್ಬರೂ ಉದ್ಯಮ ಸ್ಥಾಪನೆ ಮಾಡುವ ಕಡೆಗೆ ಗಮನಹರಿಸಬೇಕು. ಒಂದು ಸಣ್ಣ ಉದ್ದಿಮೆ ಸ್ಥಾಪನೆ ಮಾಡಿದರೂ ಐದಾರು ಜನರಿಗೆ ಕೆಲಸ ಕೊಡಬಹುದು. ಮಹಿಳೆಯರು ತಯಾರಿಸಿದ ಅನೇಕ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇಂದು ಅನೇಕ ಕಡೆಗಳಲ್ಲಿ ರಾಗಿ, ಜೋಳ, ಗಂಧದ ಕಡ್ಡಿ, ಸಾಂಬಾರ್ ಪದಾರ್ಥ ಸೇರಿದಂತೆ ಅನೇಕ ವಸ್ತುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ಹೆಚ್ಚಾಗುವಂತೆ ಮಾಡಿದರೆ ಉತ್ತಮ ಎಂದರು.
ಡಾ. ವೀರೇಂದ್ರ ಹೆಗ್ಗಡೆ ಅವರು ದೂರದೃಷ್ಟಿ ಇಟ್ಟುಕೊಂಡು ಮಹಿಳೆಯರನ್ನು ಸಂಘಟನೆ ಮಾಡಿ ಆರ್ಥಿಕವಾಗಿ ಶಕ್ತಿಯುತವನ್ನಾಗಿ ಮಾಡಬೇಕೆಂಬ ಕಾರಣಕ್ಕಾಗಿ ಸ್ವಯಂಸೇವೆಗಳ ಮೂಲಕ ಸಾಲಸೌಲಭ್ಯವನ್ನು ಕೊಡುವ ವ್ಯವಸ್ಥೆ ಮಾಡಿದ್ದಾರೆ. ಒಂದೊಂದು ಸಂಘಗಳಲ್ಲಿ ಲಕ್ಷದಿಂದ ಕೋಟಿಗಟ್ಟಲೆ ಠೇವಣಿ ಇಟ್ಟುಕೊಂಡಿದ್ದಾರೆ. ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಆರ್ಥಿಕವಾಗಿ ಮುಂದುವರಿಯುವಂತೆ ಮಾಡಿದ್ದಾರೆ ಎಂದರು. ಇಂದು ಯಾರಲ್ಲೂ ಉಳಿತಾಯದ ಮನೋಭಾವ ಕಾಣಿಸುತ್ತಿಲ್ಲ. ಖರ್ಚು ಮಾಡುವುದು ಜಾಸ್ತಿಯಾಗಿದೆ. ಸಾಲ ಮಾಡಿಯಾದರೂ ಖರ್ಚು ಮಾಡಿ ತೃಪ್ತಿ ಮಾಡುವ ಯೋಚನೆ ಬಂದಿದೆಯೇ ಹೊರತು ಉಳಿತಾಯದ ಕುರಿತು ಯೋಚಿಸುತ್ತಿಲ್ಲ ಎಂದು ಬೇಸರಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶಗೌಡ ಪತ್ನಿ ಗೌರಿ, ನಗರಪಾಲಿಕೆ ಮಾಜಿ ಸದಸ್ಯೆ ಭಾಗ್ಯ ಮಹದೇಶ್, ವಿಜಯಕುಮಾರ್ ನಾಗನಾಳ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಪ್ರಗತಿಬಂಧು ಸ್ವಸಹಾಯ ಸಂಘದ ಪದಾಧಿಕಾರಿಗಳಾದ ಶೀಲಾ ಸತ್ಯನಾರಾಯಣ್, ಶಶಿರೇಖಾ, ಯಶೋಧಾ, ಲೀಲಾವತಿ,ಶೋಭಾ, ಶೀಲಾ, ಲತಾದೇವಿ, ಗೌರಿ, ಧನಲಕ್ಷ್ಮೀ, ಸುನಂದಾ, ಸುಶೀಲಾ, ಕಮಲಶ್ರೀ, ಟ್ರಸ್ಟ್ ಮೇಲ್ವಿಚಾರಕ ಕೆ.ವಿಜಯಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net