ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರೊ.ಮೈಸೂರು ಕೃಷ್ಣಮೂರ್ತಿ, ಡಾ.ಎಂ.ಪ್ರಭು, ಎಂ.ವೀಣಾ, ಪ್ರೊ.ಬಿ.ವಿ. ಸಾಂಬಶಿವಯ್ಯ ಇನ್ನಿತರರಿದ್ದರು.
ಮೈಸೂರು: ಶಿಕ್ಷಣದ ಯಾನದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಆಯಾಮಗಳು ಬಹಳ ಪ್ರಧಾನ ಸ್ಥಾನ ವಹಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ, ವಾಗ್ಮಿ ಪ್ರೊ.ಎಂ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ನಾತಕ ವಿಭಾಗಗಳ 2025-26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಂಸ್ಕೃತಿಕ ಆಯಾಮದ ವ್ಯಕ್ತಿತ್ವವನ್ನು ರೂಪಿಸುವ ಕ್ಷೇತ್ರಗಳ ಕಡೆ ಹೆಚ್ಚಿನ ಗಮನ ನೀಡಬೇಕು. ಅವು ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ಮೂಡಿಸಿ ಔದ್ಯೋಗಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಟ್ಟಿಯಾಗಲು ಸಹಾಯ ಮಾಡುತ್ತವೆ. ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ ಭಯವನ್ನು ಹೋಗಲಾಡಿಸಲು ಸಾಂಸ್ಕೃತಿಕ ವೇದಿಕೆಗಳು ಕಾರಣವಾಗುತ್ತವೆ. ಇಂದಿನ ಯುವ ಜನತೆ ಅಭಿಮನ್ಯುವಿನ ಪರಾಕ್ರಮ ಅನುಕರಿಸಿದರೂ ಜೀವನದ ಚಕ್ರವ್ಯೆಹ ಭೇದಿಸುವುದಷ್ಟೇ ಅಲ್ಲದೆ ಅದನ್ನು ಜಯಿಸಿ, ಹೊರಬರುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದರು.
ರಾಷ್ಟ್ರಮಟ್ಟದ ಖೋಖೋ ಆಟಗಾರ್ತಿ ಎಂ.ವೀಣಾ ಮಾತನಾಡಿ, ಗ್ರಾಮೀಣ ಪ್ರತಿಭೆಗಳ ಅನಾವರಣ ಯಾವುದೇ ಲಿಂಗ ತಾರತಮ್ಯವಿಲ್ಲದೆ ಆಗಬೇಕಾಗಿದೆ. ಹೆಣ್ಣುಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಬಹುಮುಖ್ಯ. ಹಾಗೆಯೇ ವಿದ್ಯಾರ್ಥಿಗಳ ಶಿಸ್ತು ಪಾಲನೆಗೆ ಕ್ರೀಡೆ ಮಾರ್ಗದರ್ಶನ ನೀಡುತ್ತದೆ ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಕಾಲೇಜುಗಳು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳಾಗಬೇಕು. ಆಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಕ್ರೀಡಾ ಚಟುವಟಿಕೆಗಳಿಂದ ಸದೃಢ ದೇಹ ಮತ್ತು ಮನಸ್ಸಿನ ಜತೆಗೆ ಸ್ನೇಹ ಹಾಗೂ ಪರಸ್ಪರ ಗೌರವ ಸಾಧ್ಯವಾಗುತ್ತದೆ. ಸಾಂಸ್ಕೃತಿಕ ಪ್ರತಿಭೆ ಮತ್ತು ಕ್ರೀಡೆಯ ಜತೆಗೆ ಕೃತಕ ಬುದ್ಧಿಮತ್ತೆಯ ತಾಂತ್ರಿಕ ಜ್ಞಾನ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಉದ್ಯೋಗದ ಭರವಸೆ ಈ ತಂತ್ರಜ್ಞಾನ ಮೂಡಿಸುತ್ತದೆ ಎಂದರು.
ಪ್ರಾಂಶುಪಾಲ ಡಾ.ಎಂ.ಪ್ರಭು ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ವಚನ ಸಾಹಿತ್ಯ, ಸಾಂಸ್ಕೃತಿಕ ವಿಚಾರಧಾರೆ ಹುರಿದುಂಬಿಸುತ್ತವೆ. ವಿದ್ಯಾರ್ಥಿಗಳಲ್ಲಿ ಪಠ್ಯೇತರ ಕೌಶಲ ಹೆಚ್ಚಿಸುವುದು ಎಲ್ಲ ಶಿಕ್ಷಣ ಕ್ಷೇತ್ರಗಳ ಕರ್ತವ್ಯ ಎಂದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ವಿಭಾಗದ ಸಂಚಾಲಕ ವಿ. ಶಿವ, ಕ್ರೀಡಾ ವಿಭಾಗದ ಸಂಚಾಲಕ ಪಿ.ಕಾರ್ತಿಕ್ ಇನ್ನಿತರರಿದ್ದರು.