ದುಶ್ಚಟ ಬಿಡಿಸುವ ಕೇಂದ್ರದಲ್ಲಿ ಅಗ್ನಿ ಅವಘಡ

ಕ್ರೈಮ್
ಕ್ರೈಮ್
Published on
ಮೈಸೂರು: ನಗರದ ದುಶ್ಚಟ ಬಿಡಿಸುವ ಕೇಂದ್ರವೊಂದು ಶನಿವಾರ ಸಂಜೆ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ.ವೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಗರದ ಸಾತಗಳ್ಳಿ 1ನೇ ಹಂತದ ರಾಜಕುಮಾರ್ ರಸ್ತೆಯಲ್ಲಿನ ಬೆಸ್ಟ್ ಲೈಫ್ ಫೌಂಡೇಷನ್(ದುಶ್ಚಟ ಬಿಡಿಸುವ ಕೇಂದ್ರ)ನಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡು ಪೀಠೋಪಕರಣಗಳು ಸುಟ್ಟುಹೋಗಿವೆ. ಈ ವೇಳೆ ಕೇಂದ್ರದಲ್ಲಿ 30 ಜನರು ಇದ್ದರು. ಆದರೆ, ಅಗ್ನಿ ಅನಾಹುತ ಸಂಭವಿಸುವ ವೇಳೆ ಯಾರು ಕೇಂದ್ರದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.
ಕೇಂದ್ರಕ್ಕೆ ಬೆಂಕಿ ಬಿದ್ದಿರುವ ವಿಚಾರ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅಗ್ನಿ ಅನಾಹುತ ಹೇಗೆ ಸಂಭವಿಸಿದೆ ಎಂದು ತಿಳಿದು ಬಂದಿಲ್ಲ ಎಂದು ಬನ್ನಿ ಮಂಟಪದ ಅಗ್ನಿ ಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಉದಯಗಿರಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ದುಶ್ಚಟಕ್ಕೀಡಾಗಿದ್ದವರನ್ನು ಅದರಿಂದ ಮುಕ್ತಗೊಳಿಸುವ ಸಲುವಾಗಿ ಈ ಕೇಂದ್ರದಲ್ಲಿ ಇರಿಸಲಾಗಿತ್ತು. ಸಂಜೆ ಮೂವರು ಯುವಕರ ನಡುವೆ ಗಲಾಟೆ ನಡೆದು ಕೈ ಕೈ ಮಿಲಾಸಿದ್ದಾರೆ. ಈ ನಡುವೆ ಗಲಾಟೆ ತಾರಕಕ್ಕೇರಿ ಗುಂಪುಗಳಾಗಿ ವಿಭಜನೆಗೊಂಡು ಹೊಡೆದಾಟ ನಡೆದಿದೆ. ತದನಂತರ ಕೆಲವರು ತಮಗೆ ನೀಡಿದ್ದ ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ವ್ಯವಸ್ಥಾಪಕರು ಕೂಡಲೇ ಬಾಗಿಲ ಬೀಗ ತೆಗೆದು ಎಲ್ಲರನ್ನೂ ಹೊರಬಿಡುತ್ತಿದ್ದಂತೆ ಎಲ್ಲರೂ ಕೇಂದ್ರದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ದೂರು ಸ್ವೀಕರಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net