ರಮ್ಮನಹಳ್ಳಿ ಪ.ಪಂ. ಮುಖ್ಯಾಧಿಕಾರಿ ವಿರುದ್ಧ ಎಫ್‌ಐಆರ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ಭೂಮಾಫಿಯಾದರೊಂದಿಗೆ ಸೇರಿ ಮೈಸೂರು ಮಹಾನಗರ ಪಾಲಿಕೆಯ ಆಸ್ತಿಯನ್ನು ಖಾಸಗಿಯವರಿಗೆ ಇ- ಖಾತೆ ಮಾಡಿಕೊಟ್ಟಿದ್ದ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಸೋಮವಾರ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮ್ಮನಹಳ್ಳಿ ಗ್ರಾಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಖರೀದಿ ಮಾಡಿದ್ದ ಜಾಗವನ್ನು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ಖಾಸಗಿಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದರು.
ಈ ಕುರಿತು ಸಾರ್ವಜನಿಕರ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರಿಂದ ಪೌರಾಡಳಿತ ನಿರ್ದೇಶನಾಲಯವು ವರದಿ ಪಡೆದು ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಇತ್ತೀಚೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿತ್ತು. ಅಲ್ಲದೆ, ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ಬೆಳವಣಿಗೆಯ ನಡುವೆ ನಗರ ಪಾಲಿಕೆ ಅಧಿಕಾರಿಗಳು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?:
ಆಶ್ರಯ ಯೋಜನೆಯಡಿ ಬಡ ವರ್ಗದವರಿಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ನಗರ ಪಾಲಿಕೆಯು ರಮ್ಮನಹಳ್ಳಿ ಗ್ರಾಮದ ಕೆಂಚಯ್ಯ ಅವರಿಂದ 30.08 ಗುಂಟೆ ಜಮೀನನ್ನು 2005ರಲ್ಲಿ ಖರೀದಿಸಿತ್ತು. ಇದಾದ ನಂತರ ಕೆಂಚಯ್ಯ ಮಗಳು ಸುಂದ್ರಮ್ಮ ತಮಗೆ ಭಾಗ ಬರಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಸುಂದ್ರಮ್ಮ ಅವರಿಗೆ ಮೂರನೇ ಒಂದು ಭಾಗ (10 ಗುಂಟೆ) ಜಮೀನನ್ನು ನೀಡಲಾಯಿತು. ಉಳಿದ 20.08 ಗುಂಟೆ ಜಮೀನಿಗೆ ನಗರ ಪಾಲಿಕೆ ದಾಖಲೆ ಮಾಡಿಕೊಳ್ಳದೆ ನಿರ್ಲಕ್ಷೃ ವಹಿಸಿದ ಹಿನ್ನೆಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೆಂಚಯ್ಯ ಹೆಸರಿನಲ್ಲಿ ಆರ್‌ಟಿಸಿ ಮುಂದುವರೆಸಲಾಯಿತು. ಕೆಂಚಯ್ಯ ನಿಧನರಾ ಬಳಿಕ ಈ ಜಮೀನು ಅವರ ಪತ್ನಿ ಚೌಡಮ್ಮ, ಮಕ್ಕಳಾದ ದೇವರಾಜು, ಸುಂದ್ರಮ್ಮ ಹೆಸರಿಗೆ ಖಾತೆಯಾಯಿತು.
ನಗರ ಪಾಲಿಕೆಗೆ ಸೇರಿದ 20.08 ಗುಂಟೆ ಆಸ್ತಿಯನ್ನು ಚೌಡಮ್ಮ ಮತ್ತು ಮಕ್ಕಳು ಸೈಯ್ಯದ್ ಫೈಸಲ್ ಎಂಬವರಿಗೆ 2023ರಲ್ಲಿ ಮಾರಾಟ ಮಾಡಿದರು. ನಂತರ ಸೈಯ್ಯದ್ ಫೈಸಲ್ ಸದರಿ ಜಮೀನನ್ನು ಫಾಜೀಲ್ ಬೇಗ್ ಹಾಗೂ ವಹೀದ್ ಅಖ್ತರ್ ಖಾನ್‌ಗೆ ಮಾರಾಟ ಮಾಡಿ ಕ್ರಯಪತ್ರವನ್ನು 10-10-2024 ರಂದು ನೋಂದಣಿ ಮಾಡಿದರು. ಇತ್ತೀಚೆಗೆ ಸದರಿ ಜಾಗದಲ್ಲಿ ನಿವೇಶಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವ ಪ್ರಯತ್ನ ನಡೆದ ಸಂದರ್ಭ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಧ್ವನಿ ಎತ್ತಿದಾಗ ಎಚ್ಚೆತ್ತುಕೊಂಡ ನಗರ ಪಾಲಿಕೆ ಅಧಿಕಾರಿಗಳು ಆಸ್ತಿ ರಕ್ಷಣೆಗೆ ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net