ಎಸ್ಸಿ-ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಧನ ಸಹಾಯ

ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಶಿಷ್ಯವೇತನಕ್ಕೆ ಆಗ್ರಹಿಸಿ ಸತತ 27 ದಿನಗಳಿಂದ ಹೋರಾಟ
  • ಸಮಸ್ಯೆ ಪರಿಹಾರಕ್ಕಾಗಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಮಧ್ಯಪ್ರವೇಶ
ಮೈಸೂರು: ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಂಶೋಧನೆ ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ 33,000 ರೂ. ಧನಸಹಾಯ ನೀಡಲು ತೀರ್ಮಾನಿಸಲಾಗಿದೆ.
ಶಿಷ್ಯವೇತನಕ್ಕೆ ಆಗ್ರಹಿಸಿ ಸತತ 27 ದಿನಗಳಿಂದ ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದ ಕ್ರಾಫಡ್ ಭವನದ ಎದುರು ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸ್ಪಂದಿಸಿ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ್ದ ಎಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧಕರಿಗೆ 50:50 ಅನುಪಾತದ ಅನುದಾನದಡಿ ಈ ಶಿಷ್ಯವೇತನ ನೀಡಲು ತೀರ್ಮಾನಿಸಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ವತಿಯಿಂದ 16,500 ರೂ.ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 16,500 ರೂ. ಒಳಗೊಂಡಂತೆ 33,000 ರೂ.ಮಾಸಿಕ ಧನಸಹಾಯವನ್ನು ಸಂಶೋಧಕರಿಗೆ ನೀಡಲು ನಿರ್ಧರಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ವಿಳಂಬವಾದ ಪಕ್ಷದಲ್ಲಿ, ಮೈಸೂರು ವಿಶ್ವವಿದ್ಯಾಲಯದ ವತಿಯಿಂದಲೇ ಮುಂಗಡವಾಗಿ ಹಣ ಬಿಡುಗಡೆ ಮಾಡಲಾಗವುದು. ತದನಂತರ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿಶ್ವವಿದ್ಯಾಲಯದ ಸಮನ್ವಯದೊಂದಿಗೆ ಅನುದಾನವನ್ನು ಸರಿಹೊಂದಿಸಲು ಕ್ರಮ ವಹಿಸಲಾಗುವುದು ಎಂದು ಮೈಸೂರ ವಿಶ್ವ ವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net