ಹೈದರಾಬಾದ್ ಮಾದರಿಯಲ್ಲಿ ಮೈಸೂರಿನಲ್ಲೂ ಫಿಲ್ಮ್ ಸಿಟಿ ನಿರ್ಮಾಣ

2018ನೇ ಮತ್ತು 19ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ
Published on
ಮೈಸೂರು: ಹೈದರಾಬಾದ್ ಫಿಲ್ಮ್ ಸಿಟಿ ಮಾದರಿಯಲ್ಲಿ ಮೈಸೂರಿನಲ್ಲೂ ಚಿತ್ರನಗರಿ ನಿರ್ಮಾಣ ಮಾಡಲಾಗುವುದು. ಅದಕ್ಕಾಗಿ ಡಿಸೆಂಬರ್ ಅಂತ್ಯಕ್ಕೆ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ 2018ನೇ ಮತ್ತು 19ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಿತ್ರನಗರಿ ನಿರ್ಮಾಣಕ್ಕೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಮೈಸೂರಿನಲ್ಲಿ ಮೀಸಲಿಟ್ಟಿರುವ 160 ಎಕರೆ ಜಾಗವನ್ನು ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರಿಸಲಾಗಿದೆ. ಡಿಪಿಆರ್ ಕೈಸೇರಿದ ಬಳಿಕ ಆದಷ್ಟು ಬೇಗ ಟೆಂಡರ್ ಕರೆದು ಕೆಲಸ ಶುರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಕೇವಲ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ. ಉತ್ತಮ ಸಿನಿಮಾ ಮಾಡಿ ಎಂದು ಸಿಎಂ ಅವರು ಸಿನಿಮಾದವರಿಗೆ ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರ ನೀಡುವ ಸಬ್ಸಿಡಿಯ ಹಿಂದೆ ಬೀಳಬೇಡಿ. ಗುಣಮಟ್ಟದ ಸಿನಿಮಾ ಮಾಡಿ. ಯಾವುದೇ ಕಾರಣಕ್ಕೂ ಸರ್ಕಾರದ ಸಹಾಯಧನಕ್ಕಾಗಿ ಚಲನಚಿತ್ರ ತಯಾರಿಸಬಾರದು. ಜನ ಮೆಚ್ಚುವ, ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ಸಿನಿಮಾ ಬರುತ್ತಿಲ್ಲ. ಈ ಕಾರಣಕ್ಕೆ ಏನೂ ಸಬ್ಸಿಡಿ ನೀಡುವುದನ್ನು ಸ್ಥಗಿತಗೊಳಿಸಿಲ್ಲ. ಸದ್ಯ ಬಾಕಿ ಇರುವ ಎಲ್ಲ ವರ್ಷದ ಸಬ್ಸಿಡಿಯನ್ನೂ ಒಟ್ಟಿಗೆ ವಿತರಿಸಲಾಗುವುದು ಎಂದೂ ಆಶ್ವಾಸನೆ ನೀಡಿದರು.
ಇನ್ನು ಮುಂದೆ ಪ್ರತಿ ವರ್ಷವೂ ಸಿನಿಮಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2018ನೇ ಮತ್ತು 2019ನೇ ಸಾಲಿನ ಪ್ರಶಸ್ತಿಯನ್ನೂ ಆರು ವರ್ಷ ಬಳಿಕ ನೀಡಲಾಗುತ್ತಿದೆ. ಇದಕ್ಕೆ ಹಿಂದಿನ ಸರ್ಕಾರವೇ ಕಾರಣ. ಹಿಂದಿನ ಸರ್ಕಾರ ಆಯಾ ವರ್ಷವೇ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸದ ಕಾರಣಕ್ಕೆ 2020ನೇ ಸಾಲಿನಿಂದಲೂ ಪ್ರಶಸ್ತಿಗಳು ಬಾಕಿ ಉಳಿದಿವೆ. ಇದು ತಪ್ಪು. ಹೀಗೆ ಆಗಬಾರದು ಎಂದರು.
ಆಯಾ ವರ್ಷದ ಸಿನಿಮಾಗಳಿಗೆ ಮರು ವರ್ಷವೇ ಕೊಟ್ಟರೆ ಮಾತ್ರ ಅರ್ಥಪೂರ್ಣ ಆಗಿರುತ್ತದೆ. ಕೆಲವೇ ದಿನಗಳಲ್ಲಿ ಹಳೇ ಸರ್ಕಾರದ ಅವಧಿಯ ಇನ್ನೆರಡು ವರ್ಷದ ಸಿನಿಮಾ ಪ್ರಶಸ್ತಿಗಳನ್ನು ನೀಡಲು ಸೂಚನೆ ನೀಡಿದ್ದು, ಬಳಿಕ ಆಯಾ ವರ್ಷದ ಪ್ರಶಸ್ತಿಗಳನ್ನು ಮರು ವರ್ಷದ ಆರಂಭದಲ್ಲೇ ನೀಡಲಾಗುವುದು ಎಂದರು.
ಪರದೆ ಮೇಲಿನ ಸಿನಿ ಜೀವನ ಮತ್ತು ನೈಜ ಜೀವನ ಬೇರೆ ಬೇರೆ ಆಗಬಾರದು. ಭಿನ್ನವಾಗದೆ ಅದು ಒಂದೇ ರೀತಿಯಲ್ಲಿ ಇರಬೇಕು. ಏಕೆಂದರೆ, ನಟ-ನಟಿಯ ಪರದೆ ಮೇಲಿನ ಜೀವನವನ್ನು ಜನಸಾಮಾನ್ಯರು ಸಹ ಪಾಲನೆ ಮತ್ತು ಅನುಕರಣೆ ಮಾಡುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.
ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ ಜೀವನದಲ್ಲೂ ನಡೆದುಕೊಳ್ಳಬೇಕು. ಡಾ. ರಾಜಕುಮಾರ್ ಅವರು ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯವನ್ನು ಪಾಲಿಸಿದರು. ಈ ಕಾರಣಕ್ಕೆ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಸಿಎಂ ಹೇಳಿದರು.
ಚಲನಚಿತ್ರ ಅತ್ಯಂತ ಪ್ರಭಾವಿ ಮಾಧ್ಯಮ. ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಸಿನಿಮಾ ತಾರೆಯರು ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅಷ್ಟೇ ಆದರ್ಶಯುತವಾಗಿ ಬದುಕಬೇಕು. ಸಮಾಜ ತಿದ್ದುವ ಸಿನಿಮಾಗಳನ್ನು ಹೆಚ್ಚೆಚ್ಚು ತಯಾರಿಸಬೇಕು ಎಂದರು.
ಮೊದಲೆಲ್ಲ ಸಿನಿಮಾಗಳ ಸಂಖ್ಯೆ ಕಡಿಮೆ ಇತ್ತು. ನಾವು ನೋಡಿದ್ದನ್ನೇ ಮತ್ತೆ ಮತ್ತೆ ನೋಡುತ್ತಿದ್ದೆವು. ಈಗ ಸಿಕ್ಕಾಪಟ್ಟೆ ಸಿನಿಮಾಗಳು ಬರುತ್ತಿವೆ. ಆದರೆ, ಸಾಮಾಜಿಕ ಕಾಳಜಿ ಮತ್ತು ಗುಣಮಟ್ಟ ಕಡಿಮೆ ಆಗಿದೆ. ಆದ್ದರಿಂದ ಈಗ ಸಿನಿಮಾ ನೋಡುವುದನ್ನೇ ಕಡಿಮೆ ಮಾಡಿದ್ದೇನೆ. ಆದರೆ, ನಮ್ಮ ಸರ್ಕಾರ ಕನ್ನಡ ಸಿನಿಮೋದ್ಯಮದ ಆರೋಗ್ಯಕಾರಿ ಪ್ರಗತಿ ಮತ್ತು ಬೆಳವಣಿಗೆಗೆ ಸದಾ ಬೆಂಬಲ ನೀಡುತ್ತದೆ ಎಂದರು.
2018 ಮತ್ತು 2019ನೇ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಸಿನಿಮಾ ಕ್ಷೇತ್ರದವರಿಗೆ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು. 2018 ಮತ್ತು 2019ನೇ ಸಾಲಿನ ಪ್ರಶಸ್ತಿ ಪಡೆದ ಚಿತ್ರಗಳ ಕುರಿತ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಇನ್ನಿತರರಿದ್ದರು.
(ಫೋಟೋ ಕಳಿಸಲಾಗುವುದು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net