ರೈತ ಸಂಘಟನೆಯ ಪ್ರಮುಖರನ್ನು ಕಡೆಗಣಿಸಿ, ಕುಂದುಕೊರತೆ ಸಭೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ವಿರುದ್ಧ ಕಬ್ಬು ಬೆಳೆಗಾರರ ಸಂಘದ ಸದಸ್ಯರು ತಿ.ನರಸೀಪುರ ಪುರಸಭೆ ಮುಂದೆ ಪ್ರತಿಭಟಿಸಿದರು.
ತಿ.ನರಸೀಪುರ: ರೈತ ಸಂಘಟನೆಯ ಪ್ರಮುಖರನ್ನು ಕಡೆಗಣಿಸಿ, ರೈತರ ಕುಂದುಕೊರತೆ ಸಭೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ವಿರುದ್ಧ ತಾಲೂಕು ಕಬ್ಬು ಬೆಳೆಗಾರರ ಸಂಘದ ಸದಸ್ಯರು ಮಂಗಳವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಪುರಸಭೆ ಸಭಾಂಗಣದಲ್ಲಿ ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಗೆ ಮಧ್ಯೆ ಪ್ರವೇಶಿಸಿದ ರೈತರು, ತಮ್ಮ ಸಂಘಟನೆಯನ್ನು ಆಹ್ವಾನಿಸದೆ ಸಭೆ ನಡೆಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಭೆ ಮಾಡಲು ರೈತ ಸಂಘಟನೆಯವರು ಮನವಿ ಪತ್ರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಸಮಜಾಯಿಷಿ ನೀಡಲು ಮುಂದಾದರು. ರೈತರ ಕುಂದುಕೊರತೆ ಸಭೆ ಕರೆದಿಲ್ಲ, ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಹೆಚ್ಚಾಗಿ ರೈತರೇ ಇದ್ದದ್ದನ್ನು ಉಲ್ಲೇಖಿಸಿದ ಸಂಘಟನೆಯವರು, ಹಾಗಾದರೆ ಇಲ್ಲಿ ಕುಳಿತಿರುವವರು ರೈತರಲ್ಲವೇ ಎಂದು ಕಿಡಿಕಾರಿದರು.
ನಂತರ ಮಾತು ಬದಲಿಸಿದ ತಹಸೀಲ್ದಾರ್, ನೀವು ಸಭೆ ಕರೆಯುವಂತೆ ಮನವಿ ಮಾಡಿದರೆ, ನಿಮಗೆ ಮತ್ತೊಂದು ಸಭೆ ಕರೆಯುತ್ತೇನೆ ಎಂದು ಮುಖಂಡರಿಗೆ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಸಂಘದ ಸದಸ್ಯರು, ಒಂದೊಂದು ಸಂಘಟನೆಗೆ ಒಂದೊಂದು ಸಭೆ ಕರೆಯುತ್ತಿರಾ? ರೈತರ ಸಭೆ ಎಂದರೆ ತಾಲೂಕಿನ ಎಲ್ಲ ಸಂಘಟನೆಯ ಮುಖ್ಯಸ್ಥರು, ಸದಸ್ಯರನ್ನು ಆಹ್ವಾನಿಸಿ, ಅವರ ಅಹವಾಲು ಸ್ವೀಕರಿಸಿ ಅಧಿಕಾರಿಗಳಿಂದ ಉತ್ತರ ಕೊಡಿಸುವ ಕೆಲಸ ಮಾಡಬೇಕು. ಆದರೆ ನೀವು ಆ ಕೆಲಸ ಮಾಡಿಲ್ಲ. ಕೇವಲ ಒಂದು ಸಂಘಟನೆಯನ್ನು ಮಾತ್ರವೇ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಲು ಮುಂದಾಗಿದ್ದೀರಾ, ಇದು ಸರಿಯಾದ ಕ್ರಮವಲ್ಲ ಎಂದು ತಹಸೀಲ್ದಾರ್ ಹಾಗೂ ತಾಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪುರಸಭೆ ಮುಂದೆ ಕುಳಿತು ತಹಸೀಲ್ದಾರ್ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ತಹಸೀಲ್ದಾರ್ ಕೇವಲ ಒಂದು ಸಂಘಟನೆಗೆ ಸೀಮಿತವಾಗಿ ಸಭೆ ಮಾಡುತ್ತಿದ್ದಾರೆ. ಈ ನಡೆ ರೈತ ಸಮುದಾಯದ ಬಗ್ಗೆ ತಾಲೂಕು ಆಡಳಿತಕ್ಕೆ ಇರುವ ನಿರ್ಲಕ್ಷ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ರೈತರ ಕುಂದುಕೊರತೆ ಸಭೆ ಕರೆದಿಲ್ಲ ಎಂದು ತಹಸೀಲ್ದಾರ್ ಸಮಜಾಯಿಷಿ ನೀಡುತ್ತಾರೆ. ಕೇವಲ 6 ಇಲಾಖೆ ಸಭೆ ಕರೆದಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಲು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳು ಸಹಿ ಮಾಡುವ ಪತ್ರದಲ್ಲಿ ರೈತರ ಕುಂದು ಕೊರತೆ ಸಭೆ ಎಂದು ನಮೂದಾಗಿದೆ ಎಂದು ಕಿಡಿಕಾರಿದರು. ಮುಂದೆ ಇದೇ ರೀತಿಯ ತಾರತಮ್ಯ ಮುಂದುವರಿದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಕಿರಗಸೂರು ಪ್ರಸಾದ್ ನಾಯಕ, ಕುರುಬೂರು ಗೌರಿಶಂಕರ, ಟೌನ್ ಅಧ್ಯಕ್ಷ ಅಪ್ಪಣ್ಣ, ಹ್ಯಾಕ ನೂರು ರಾಜೇಶ್, ಯೋಗೇಶ್, ಕೆ.ಜಿ.ಗುರುಸ್ವಾಮಿ, ಕಿರಗಸೂರು ಸುರೇಶ, ಸಂತೋಷ, ತರಕಾರಿ ಲಿಂಗರಾಜು ಇದ್ದರು.