ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯವಾಗದಿರಲಿ

ಹುಣಸೂರು ನಗರದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಜಿ.ಡಿ.ಹರೀಶ್‌ಗೌಡ ಚಾಲನೆ ನೀಡಿದರು. ಕಿರಂಗೂರು ಬಸವರಾಜು, ಗೋವಿಂದೇಗೌಡ, ವಿಷಕಂಠಪ್ಪ, ಉಂಡುವಾಡಿ ಚಂದ್ರೇಗೌಡ, ಮೋದೂರು ಶಿವಣ್ಣ, ಡಿಎಂ ಬಿ.ಎಸ್.ಕಿರಣ್ ಇತರರಿದ್ದಾರೆ.
ಹುಣಸೂರು ನಗರದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಜಿ.ಡಿ.ಹರೀಶ್‌ಗೌಡ ಚಾಲನೆ ನೀಡಿದರು. ಕಿರಂಗೂರು ಬಸವರಾಜು, ಗೋವಿಂದೇಗೌಡ, ವಿಷಕಂಠಪ್ಪ, ಉಂಡುವಾಡಿ ಚಂದ್ರೇಗೌಡ, ಮೋದೂರು ಶಿವಣ್ಣ, ಡಿಎಂ ಬಿ.ಎಸ್.ಕಿರಣ್ ಇತರರಿದ್ದಾರೆ.
Published on
ಹುಣಸೂರು: ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರೈತರಿಗೆ ಅನಾನುಕೂಲವಾಗುವ ರೀತಿಯ ಯಾವುದೇ ಕ್ರಮಗಳನ್ನು ಅನುಸರಿಸಬಾರದೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಎಪಿಎಂಸಿ ಆವರಣದಲ್ಲಿ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಸಾಲಿನಲ್ಲಿ 60 ಲಕ್ಷ ಕ್ವಿಂಟಲ್ ಗುಣಮಟ್ಟದ ರಾಗಿಯನ್ನು ಖರೀದಿಸಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಏಜೆನ್ಸಿಯ ಮೂಲಕ ರಾಗಿ ಖರೀದಿಸಲಿದೆ ಎಂದರು.
ಕಳೆದ ಸಾಲಿನಲ್ಲಿ ಖರೀದಿ ಕೇಂದ್ರದಲ್ಲಿ ಒಂದು ಕ್ವಿಂಟಲ್ ರಾಗಿಯಲ್ಲಿ 4 ಕೆಜಿ ಪ್ರಮಾಣದ ರಾಗಿಯನ್ನು ವಿವಿಧ ಕಾರಣವನ್ನೊಡ್ಡು ಕಡಿತಗೊಳಿಸಿ ಹಣ ನೀಡಲಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ರಾಗಿಯಲ್ಲಿ ಅನ್ಯವಸ್ತುಗಳ ಸೇರ್ಪಡೆ, ಹಾನಿಗೊಳಗಾದ ಧಾನ್ಯಗಳು ಮುಂತಾದ ಕಾರಣಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ಕಡಿತಗೊಳಿಸಲು ಸರ್ಕಾರದ ಆದೇಶದಲ್ಲಿ ಉಲ್ಲೇಖಿತವಾಗಿದೆ. ಒಟ್ಟು 640 ಗ್ರಾಂಗಳಿಗಿಂತ ಅಧಿಕ ಪ್ರಮಾಣದಲ್ಲಿ ಕಡಿತಗೊಳಿಸಬಾರದು. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಯಾವುದೇ ಕಾರಣಕ್ಕೂ ಕಡಿತಗೊಳಿಸಬೇಡಿ. ನೋಂದಾಯಿತ ರೈತರಿಗೆ ನಿಗದಿಪಡಿಸಿದ ದಿನದಂದು ಯಾವುದೇ ಕಾರಣಕ್ಕೂ ವ್ಯತ್ಯಯವಾಗದಂತೆ ಖರೀದಿಸಿ. ಕೇಂದ್ರದಲ್ಲಿ ಗುತ್ತಿಗೆ ಆಧಾರದಡಿ ನೇಮಿಸಿಕೊಳ್ಳುವ ಲೇಬರ್‌ಗಳ ವ್ಯವಸ್ಥೆ ಕ್ರಮಬದ್ಧವಾಗಿರಲಿ. ವಿನಾಕಾರಣ ರೈತರಿಂದ ಹಣಕ್ಕಾಗಿ ಒತ್ತಾಯಿಸಿದ ದೂರುಗಳು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಹಿಸುವುದಾಗಿ ಎಚ್ಚರಿಸಿದರು.
ಖರೀದಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಬಿ.ಎಸ್.ಕಿರಣ್ ಮಾತನಾಡಿ, ಎಫ್‌ಎಕ್ಯೂ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಲು ಸರ್ಕಾರ ನಿರ್ಧರಿಸಿದೆ. ತೇವಾಂಶ ಶೇ.12 ಗರಿಷ್ಠ ಮಿತಿಯಾಗಿದೆ. ಅನ್ಯ ಪದಾರ್ಥಗಳು ಶೆ.1ರಷ್ಟು, ಇತರ ಧಾನ್ಯಗಳು ಶೇ.1, ಹಾನಿಗೊಳಗಾದ ಧಾನ್ಯಗಳು ಶೇ.1 ಮತ್ತು ಸ್ವಲ್ಪ ಹಾನಿಗೊಳಗಾದ ಧಾನ್ಯಗಳು ಶೇ.2ರ ಪ್ರಮಾಣವಿದ್ದಲ್ಲಿ ಖರೀದಿಸಲು ಅವಕಾಶವಿದೆ. ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ರಾಗಿಯನ್ನು ಮಾತ್ರ ಖರೀಸಲು ಅವಕಾಶವಿದೆ. ರೈತರು ಮಧ್ಯವರ್ತಿಗಳಿಗೆ ತಮ್ಮ ದಾಖಲಾತಿ ನಿಡುವುದಾಗಿಲಿ ಅಥವಾ ಮಧ್ಯವರ್ತಿಗಳ ಮೂಲಕ ರಾಗಿ ಮಾರಾಟ ಮಾಡಬಾರದೆಂದು ವಿನಂತಿಸಿದರು.
ಹುಣಸೂರು ಖರೀದಿ ಕೇಂದ್ರದ ಅಧಿಕಾರಿ ಮೈಕೆಲ್ ಫರ್ನಾಂಡಿಸ್ ಮಾತನಾಡಿ, ಕ್ವಿಂಟಲ್ ರಾಗಿಗೆ 4886 ರೂ. ಬೆಂಬಲ ಬೆಲೆ ಹಾಗೂ ಭತ್ತಕ್ಕೆ 2369 ರೂ. ಬೆಲೆ ನಿಗದಿಪಡಿಸಲಾಗಿದ. ತಾಲೂಕಿನ ಎಪಿಎಂಸಿ ಕೇಂದ್ರದ ಖರೀದಿ ಕೇಂದ್ರದಲ್ಲಿ ಒಟ್ಟು ರಾಗಿ ಮಾರಾಟಕ್ಕೆ 5021 ರೈತರು ನೋಂದಾಯಿಸಿಕೊಂಡು 1.25 ಲಕ್ಷ ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲಿದ್ದಾರೆ. ತಾಲೂಕಿನ ರತ್ನಪುರಿ ಖರೀದಿ ಕೇಂದ್ರದಲ್ಲಿ 231 ರೈತರು ನೋಂದಾಯಿಸಿಕೊಂಡಿದ್ದು, 5742 ಕ್ವಿಂಟಲ್ ರಾಗಿ ಮಾರಾಟ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಉಂಡುವಾಡಿ ಸಿ.ಚಂದ್ರೇಗೌಡ, ವಿಷಕಂಠಪ್ಪ, ಬಸವರಾಜು, ಮುಖಂಡರಾದ ಕಿರಂಗೂರು ಬಸವರಾಜು, ಟಿಎಪಿಸಿಎಂಎಸ್ ಸದಸ್ಯ ಗೋವಿಂದೇಗೌಡ, ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಶಿರಸ್ತೇದಾರ್ ಲಕ್ಷ್ಮೀ, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ರೈತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net