ಸಫಾರಿ ಪುನರಾರಂಭ ವಿರೋಧಿಸಿ ಮೈಸೂರಿನಲ್ಲಿ ರೈತರಿಂದ ಪ್ರತಿಭಟನೆ

ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಪುನರಾರಂಭಿಸುವುದನ್ನು ವಿರೋಧಿಸಿ ರೈತರು ಗುರುವಾರ ಮೈಸೂರು ನಗರದ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿದರು.
ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಪುನರಾರಂಭಿಸುವುದನ್ನು ವಿರೋಧಿಸಿ ರೈತರು ಗುರುವಾರ ಮೈಸೂರು ನಗರದ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿದರು.
Published on
ಮೈಸೂರು: ನಾಗರಹೊಳೆ ಹಾಗೂ ಬಂಡೀಪುರ ಅರಣ್ಯದಲ್ಲಿ ಸಫಾರಿ ಪುನರಾರಂಭ ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ವತಿಯಿಂದ ಗುರುವಾರ ಅರಣ್ಯ ಭವನ ಎದುರು ಪ್ರತಿಭಟನೆ ನಡೆಯಿತು.
ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ನಾಗರಹೊಳೆ ಮತ್ತು ಬಂಡೀಪುರದಲ್ಲಿ ಹಂತ ಹಂತವಾಗಿ ಸಫಾರಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಧಾನಸೌಧದಲ್ಲಿ ಹೇಳಿಕೆ ನೀಡಿರುವುದು ಖಂಡನೀಯ. ಸಚಿವರ ಈ ನಿರ್ಧಾರ ರೈತರು, ಪ್ರಾಣಿಗಳು ಹಾಗೂ ಅರಣ್ಯ ವಿರೋಧಿಯಾಗಿದೆ. ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟ ಆಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳು, ಶ್ರೀಮಂತರಿಗೆ ಮೋಜು ಮಸ್ತಿ ಮಾಡಲು ಸಫಾರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸಫಾರಿ ಹಣದಿಂದ ಸರ್ಕಾರ ನಡೆಸುವ ದಾರಿದ್ರೃ ರಾಜ್ಯ ಸರ್ಕಾರಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ರೈತರ ಮಕ್ಕಳ ಸಮಾಧಿ ಮೇಲೆ ಗ್ಯಾರಂಟಿ ಯೋಜನೆಗೆ ಹಣ ಒದಗಿಸಲು ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂದಿದೆ ಎಂದು ಕಿಡಿಕಾರಿದರು.
ಸಚಿವರು, ಶಾಸಕರು, ಸಂಸದರು ಕಾಡಂಚಿನಲ್ಲಿ ವಾಸ ಮಾಡುತ್ತಿಲ್ಲ ಹಾಗೂ ವ್ಯವಸಾಯ ಮಾಡುತ್ತಿಲ್ಲ. ಇವರು ಕೇವಲ ಕಾಡನ್ನು ನೋಡಿ ಮನೆ ಸೇರುತ್ತಾರೆ. ಕಾಡಂಚಿನ ಪ್ರದೇಶದಲ್ಲಿರುವ ರೈತರು, ಅವರ ಮಕ್ಕಳು ಸಫಾರಿಯಿಂದ ನೊಂದ ಪ್ರಾಣಿಗಳ ಆಕ್ರೋಶಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಫಾರಿ ಬಂದ್ ಆದ ಮೇಲೆ ಯಾವುದೇ ಮಾನವ-ಪ್ರಾಣಿ ಸಂಘರ್ಷ ವರದಿಯಾಗಿಲ್ಲ. ಸಫಾರಿಯಿಂದ ಕಾಡಿನಲ್ಲಿ ವಾಸ ಮಾಡುವ ಪ್ರಾಣಿಗಳಿಗೆ ತೊಂದರೆ ಉಂಟಾಗುತ್ತದೆ. ಸ್ಥಳೀಯ ರೈತರೊಂದಿಗೆ ಚರ್ಚಿಸದೆ ಈ ನಿರ್ಧಾರ ತೆಗೆದುಕೊಂಡಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ಡಿಸಿಎಫ್ ಪರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಕೆರೆಹುಂಡಿ ರಾಜಣ್ಣ, ಹನುಮಯ್ಯ, ಮಲಿಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ಎಚ್. ಚಿದಂಬರ್, ಮುದ್ದಳ್ಳಿ ಮಧು, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಣ್ಣ, ಚೇತನ್, ನವೀನ, ಬಸವಣ್ಣ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net