ರೈತನಿಗೆ ಮೈಸೂರಿನ ಪಿಎಸ್‌ಎನ್ ಕನ್‌ಸ್ಟ್ರಕ್ಷನ್ ಇಕ್ಯೂಪ್‌ಮೆಂಟ್ ವಂಚನೆ: ರೈತರಿಂದ ಪ್ರತಿಭಟನೆ

ಮೈಸೂರು ನಗರದ ಪಿಎಸ್‌ಎನ್ ಕನ್‌ಸ್ಟ್ರಕ್ಷನ್ ಇಕ್ಯೂಪ್‌ಮೆಂಟ್ ಕಂಪನಿ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಮೈಸೂರು ನಗರದ ಪಿಎಸ್‌ಎನ್ ಕನ್‌ಸ್ಟ್ರಕ್ಷನ್ ಇಕ್ಯೂಪ್‌ಮೆಂಟ್ ಕಂಪನಿ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿದರು.
Published on
ಮೈಸೂರು: ನಗರದ ವರ್ತುಲ ರಸ್ತೆಯ ದೇವೇಗೌಡ ವೃತ್ತದ ಬಳಿ ಇರುವ ಪಿಎಸ್‌ಎನ್ ಕನ್‌ಸ್ಟ್ರಕ್ಷನ್ ಇಕ್ಯೂಪ್‌ಮೆಂಟ್ ಕಂಪನಿಯಿಂದ ಪಾಂಡವಪುರದ ರೈತ ಸೋಮಶೇಖರ್‌ಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಕಂಪನಿಯ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಸೋಮಶೇಖರ್ ಅವರು 2018ರಲ್ಲಿ ಪಿಎಸ್‌ಎನ್ ಕನ್‌ಸ್ಟ್ರಕ್ಷನ್ ಇಕ್ಯೂಪ್‌ಮೆಂಟ್ ಕಂಪನಿಯಿಂದ 26,50,000 ರೂ. ಮೌಲ್ಯದ ಜೆಸಿಬಿಯೊಂದನ್ನು 4.90 ಲಕ್ಷ ರೂ. ಮುಂಗಡ ಹಣವಾಗಿ ನೀಡಿ ಖರೀದಿಸಿದರು. ಆ ನಂತರ ಪೂರ್ತಿ ಹಣವನ್ನು 5 ಕಂತುಗಳಲ್ಲಿ ಪಾವತಿಸಿದರು.
ಆದರೆ, ಆ ಜೆಸಿಬಿಯಲ್ಲಿ ಹಲವಾರು ದೋಷಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೋಷಗಳನ್ನು ಸರಿಪಡಿಸುವಂತೆ ಸೋಮಶೇಖರ್ ಹಲವಾರು ಬಾರಿ ಮನವಿ ಮಾಡಿಕೊಂಡರೂ ಸ್ಪಂದನೆ ದೊರೆಯಲಿಲ್ಲ. ಜೆಸಿಬಿಯಲ್ಲಿ ಹಲವು ದೋಷಗಳು ಇರುವ ಹಿನ್ನೆಲೆಯಲ್ಲಿ ಹೊಸ ಜೆಸಿಬಿ ನೀಡಲಾಗುವುದು ಎಂದು ಭರವಸೆಯನ್ನೂ ನೀಡಿದ್ದರು. ಆದರೆ, ನೀಡಿದ ಭರವಸೆಯಂತೆ ಇದುವರೆಗೂ ಜೆಸಿಬಿ ನೀಡಲಿಲ್ಲ. ಕೂಡಲೇ ಹೊಸ ಜೆಸಿಬಿ ನೀಡಬೇಕು ಅಥವಾ ನೀಡಿದ ಹಣ ವಾಪಾಸ್ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ರೈತರ ಪ್ರತಿಭಟನೆಗೆ ಮಣಿದ ಕಂಪನಿಯು 15 ದಿನಗಳ ಸಮಯಾವಕಾಶ ಕೇಳಿದ್ದು, ಅಷ್ಟರೊಳಗೆ ಹೊಸ ಜೆಸಿಬಿ ನೀಡಲು ಅಥವಾ ಹಣ ಹಿಂತಿರುಗಿಸಲು ಕ್ರಮ ವಹಿಸಲಾಗುವುದು ಭರವಸೆ ನೀಡಿದೆ. ಪ್ರತಿಭಟನೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಕೆಂಪೂಗೌಡ, ಹೊಸಕೋಟೆ ಬಸವರಾಜ್, ಪಿ.ಮರಂಕಯ್ಯ, ಕೆಂಪೇಗೌಡ, ಎಣ್ಣೆಹೊಳೆಕೊಪ್ಪಲ್ ಮಂಜುನಾಥ್ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net