ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ: ರೈತರಿಂದ ಪ್ರತಿಭಟನೆ

 ಗುಡುಮಾದನಹಳ್ಳಿಯ ಬಳಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪಿ.ಮರಂಕಯ್ಯ, ನೇತ್ರಾವತಿ, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್ ಇತರರಿದ್ದರು.
ಗುಡುಮಾದನಹಳ್ಳಿಯ ಬಳಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪಿ.ಮರಂಕಯ್ಯ, ನೇತ್ರಾವತಿ, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಂಡೀಪಾಳ್ಯ ಬಳಿಯ ಗುಡುಮಾದನಹಳ್ಳಿಯ ಬಳಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ತೀವ್ರ
  • ಗುರುತಿಸಿರುವ ಜಾಗವು ಆಸ್ಪತ್ರೆ ಕಟ್ಟಲು ಯೋಗ್ಯವಲ್ಲ.
ಮೈಸೂರು: ಬಂಡೀಪಾಳ್ಯ ಬಳಿಯ ಗುಡುಮಾದನಹಳ್ಳಿಯ ಬಳಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ತೀವ್ರವಾಗಿದ್ದು, ಇಲ್ಲಿ ನಡೆಯುತ್ತಿದ್ದ ಪೂರ್ವಸಿದ್ಧತಾ ಕಾಮಗಾರಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ಜೆಸಿಬಿ ಯಂತ್ರವನ್ನು ವಾಪಸ್ ಕಳುಹಿಸಿದ್ದಾರೆ.
ಫಲವತ್ತಾದ ಭೂಮಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಮಂಜೂರು ಮಾಡಿರುವುದನ್ನು ವಿರೋಧಿಸಿ ಸುಮಾರು 90 ದಿನಗಳಿಂದ ಹೋರಾಟ ನಡೆಯುತ್ತಿದೆ. ಇಂದು ಏಕಾಏಕಿ ಜೆಸಿಬಿ ಮೂಲಕ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಕ್ರಮದ ವಿರುದ್ಧ ರೈತರು ಪ್ರತಿಭಟನೆಗಿಳಿದರು.
ಈಗ ಗುರುತಿಸಿರುವ ಜಾಗವು ಆಸ್ಪತ್ರೆ ಕಟ್ಟಲು ಯೋಗ್ಯವಲ್ಲ. ಆದ್ದರಿಂದ ಪಕ್ಕದಲ್ಲಿರುವ ವಾಜಮಂಗಲದಲ್ಲಿ ಸರ್ಕಾರಿ ಜಮೀನು ಇದೆ. ಅದು ವ್ಯವಸಾಯ ಮಾಡಲಿಕ್ಕೆ ಯೋಗ್ಯವಲ್ಲದ ಜಾಗವಾಗಿದೆ. ಅಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ಮತ್ತು ಸರ್ಕಾರವು ಈ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಸಭೆ ಕರೆದು ಅಹವಾಲು ಮತ್ತು ಬೇಡಿಕೆ ಆಲಿಸಬೇಕು. ಅಲ್ಲಿಯವರೆಗೂ ಯಾವುದೇ ಕಾಮಗಾರಿಯನ್ನೂ ಮಾಡಬಾರದು ಎಂದು ಒತ್ತಾಯಿಸಿದರು.
ಸುಮಾರು 20 ಎಕರೆ ಪ್ರದೇಶದಲ್ಲಿ ನಿಮ್ಹಾನ್ಸ್ ಘಟಕ ನಿರ್ಮಿಸಿ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ ಈ ಜಾಗ ಫಲವತ್ತಾದ ಭೂಮಿ ಆಗಿದೆ. ಸದಾ ನೀರು ನಿಲ್ಲುವ ಜಾಗವೂ ಆಗಿರುವ ಕಾರಣ ಇಲ್ಲಿ ನಿಮ್ಹಾನ್ಸ್ ಘಟಕ ಸ್ಥಾಪನೆ ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಗುಡುಮಾದನಹಳ್ಳಿ ಸರ್ವೇ ಸಂಖ್ಯೆ 60, 68 ಮತ್ತು 8ರಲ್ಲಿರುವ ಜಮೀನಿನ ಪೈಕಿ 20 ಎಕರೆ ವಿಸ್ತೀರ್ಣವನ್ನು ನಿಮ್ಹಾನ್ಸ್ ಸಂಸ್ಥೆಗೆ ರಾಜ್ಯ ಸರ್ಕಾರ ನೀಡಿದೆ. ಈ ಸರ್ವೇ ಸಂಖ್ಯೆಯಲ್ಲಿ 60-70 ವರ್ಷಗಳಿಂದಲೂ ಸುಮಾರು 80 ರೈತ ಕುಟುಂಬಗಳು ವ್ಯವಸಾಯ ಮಾಡುತ್ತಿವೆೆ. ತೆಂಗು, ಅಡಿಕೆ ಬೆಳೆದಿರುತ್ತಾರೆ. 
ವಾರ್ಷಿಕ 2 ಫಸಲು ಭತ್ತ ಬೆಳೆಯುತ್ತಿದ್ದಾರೆ. ಗ್ರಾಮದ ಹೈನುಗಾರಿಕೆ ಪೂರಕವಾಗಿ ಹುಲ್ಲನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ನಿರ್ಮಾಣ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಮೈಸೂರು ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್ ಇತರರು ಪಾಲ್ಗೊಂಡಿದ್ದರು 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net