ಕೆಐಡಿಬಿ ಕಚೇರಿ ಮುಂದೆ ರೈತರ ಆಹೋರಾತ್ರಿ ಧರಣಿ

ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ, ಸೂಕ್ತ ಉದ್ಯೋಗ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಹೊಸಕೋಟೆ ಬಸವರಾಜು, ನೇತ್ರಾವತಿ, ಪ್ರಭಾಕರ್, ಪ್ರೇಮ್‌ರಾಜ್ ಇತರರು ಇದ್ದರು
ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ, ಸೂಕ್ತ ಉದ್ಯೋಗ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಹೊಸಕೋಟೆ ಬಸವರಾಜು, ನೇತ್ರಾವತಿ, ಪ್ರಭಾಕರ್, ಪ್ರೇಮ್‌ರಾಜ್ ಇತರರು ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿ ಕಳೆದುಕೊಂಡವರಿಗೆ ಹೆಚ್ಚಿನ ಪರಿಹಾರ, ಸೂಕ್ತ ಉದ್ಯೋಗಕ್ಕೆ ಆಗ್ರಹ
  • ಭೂಮಿ ಕಳೆದುಕೊಂಡಿರುವ ರೈತರಿಗೆ ನಿವೇಶನ, ಹೆಚ್ಚಿನ ಪರಿಹಾರ, ಉದ್ಯೋಗ ನೀಡಬೇಕು
ಮೈಸೂರು:ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ, ಸೂಕ್ತ ಉದ್ಯೋಗ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ನಗರದ ಕೆಐಡಿಬಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಆರಂಭಗೊಂಡಿತು.
ನಗರ ಕೆಆರ್‌ಎಸ್ ರಸ್ತೆಯಲ್ಲಿರುವ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ ಆರಂಭಿಸಿದ ಹೋರಾಟಗಾರರು, ಭೂಮಿ ಕಳೆದುಕೊಂಡಿರುವ ರೈತರಿಗೆ ನಿವೇಶನ ನೀಡಬೇಕು, ಹೆಚ್ಚಿನ ಪರಿಹಾರ ನೀಡಬೇಕು ಹಾಗೂ ಮನೆಗೊಂದು ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ನಗರದ ಗನ್‌ಹೌಸ್ ವೃತ್ತದಲ್ಲಿ ಜಮಾಯಿಸಿದ ಕೋಚನಹಳ್ಳಿ ಗ್ರಾಮ ಮತ್ತು ಹಿಮ್ಮಾವು ಗ್ರಾಮದ ರೈತರು ರಾಮಸ್ವಾಮಿ ವೃತ್ತದವರೆಗೆ ಪಾದಯಾತ್ರೆ ನಡೆಸಿ ಬಳಿಕ ಕೆಆರ್‌ಎಸ್ ರಸ್ತೆಯಲ್ಲಿರುವ ಕೆಐಡಿಬಿ ಕಚೇರಿಗೆ ತೆರಳಿದರು.
ರಾಜ್ಯ ರೈತ ಸಂಘ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಕೋಚನಹಳ್ಳಿ ಗ್ರಾಮದಲ್ಲಿ ಸುಮಾರು 160 ಎಕರೆ ರೈತರ ಜಮೀನನ್ನು ಗಾಲ್ಫ್ ಕಂಪನಿಯವರು ವಶಕ್ಕೆ ಪಡೆದು ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಈ ಸಂಬಂಧ ಹೋರಾಟ ಮಾಡಿಕೊಂಡು ಬರುತ್ತಿದ್ದು, ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ಅವರು ರೈತರು ಮತ್ತು ಕಂಪನಿಯವರೊಂದಿಗೆ ಮಾತುಕತೆ ನಡೆಸಿ ಉದ್ಯೋಗ ಕೊಡುವ ಭರವಸೆ ನೀಡಿ ಆದೇಶ ಮಾಡಿದ್ದರು. ಆದರೆ ಇದನ್ನು ಕಂಪನಿಯವರು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಮ್ಮಾವು ಗ್ರಾಮದಲ್ಲಿ ಒಟ್ಟು 1515 ಎಕರೆ ಜಮೀನನ್ನು ಕೆಐಡಿಬಿ ಭೂಸ್ವಾಧೀನಪಡಿಸಿಕೊಂಡು ಚಿತ್ರನಗರಿಗೆ 165 ಎಕರೆ ನೀಡಿದೆ. ಇಲ್ಲಿಯೂ ಸಹ ರೈತರಿಗೆ ಅನ್ಯಾಯವಾಗಿದ್ದು, 500 ಎಕರೆ ಪ್ರದೇಶ ಸರ್ಕಾರಿ ಗೋಮಾಳ ಎಂದು ಹೇಳಿ ರೈತರಿಗೆ ಪರಿಹಾರವನ್ನೇ ನೀಡಿಲ್ಲ. ಇಲ್ಲಿನ ಸಂತ್ರಸ್ತ ರೈತರಿಗೆ ದೊರೆಯಬೇಕಾದ 18 ಕೋಟಿ ರೂ. ಪರಿಹಾರವನ್ನು ಮೂಲ ರೈತರಿಗೆ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಹಾಗಾಗಿ ಇದರ ಮರುತನಿಖೆ ಆಗಬೇಕು. ಕೂಡಲೇ ಸಂಬಂಧಪಟ್ಟ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಮೂಲ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಂಘದ ಮೈಸೂರು ಜಿಲ್ಲಾ ಪ್ರಧಾನಾ ಕಾರ್ಯದರ್ಶಿ ಮರಕಂಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ಉಗ್ರನರಸಿಂಹೇಗೌಡ, ಚಂದ್ರಶೇಖರ್ ಮೇಟಿ, ಆನಂದೂರು ಪ್ರಭಾಕರ್, ರೈತ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೇಮ್ರಾಜ್, ಬಸವರಾಜು, ಮಂಡಕಳ್ಳಿ ಮಹೇಶ್, ಹೊಸೂರು ಕುಮಾರ್, ನೇತ್ರಾವತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net