ಕೆಂಪು ಬಂಗಾರ ಮುಸುಕಿನ ಜೋಳಕ್ಕೆ ಮನಸೋತ ರೈತರು

ಮುಸುಕಿನ ಜೋಳ
ಮುಸುಕಿನ ಜೋಳ
Published on

ಪ್ರಮುಖ ಮುಖ್ಯಾಂಶಗಳು

  • ರಾಗಿ, ತಂಬಾಕಿನತ್ತಲೂ ಒಲವು
  • ಹತ್ತಿ ಬೆಳೆಯಲು ನೀರಾಸಕ್ತಿ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

‘ಬಿಳಿ ಬಂಗಾರ’ ಹತ್ತಿ ಬೆಳೆಯತ್ತ ನಿರಾಸಕ್ತಿ ತೋರಿರುವ ರೈತರು ಮುಸುಕಿನ ಜೋಳಕ್ಕೆ ಮನಸೋತು, ಅದನ್ನೇ ಹೆಚ್ಚು ಬೆಳೆಯುತ್ತಿದ್ದಾರೆ. ಇದುವೇ ಜಿಲ್ಲೆಯ ಕೃಷಿ ವಲಯದಲ್ಲಿ ಇತ್ತೀಚಿನ ವರ್ಷದಲ್ಲಿ ಉಂಟಾಗಿರುವ ಪ್ರಮುಖ ಬದಲಾವಣೆ...!
ವರ್ಷದಿಂದ ವರ್ಷಕ್ಕೆ ಹತ್ತಿ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಈ ಜಾಗವನ್ನು ಮೆಕ್ಕೆ ಜೋಳ ಆಕ್ರಮಿಸಿಕೊಳ್ಳುತ್ತಿದ್ದು, ಕ್ಷೇತ್ರ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಜತೆಗೆ, ರಾಗಿ, ತಂಬಾಕಿನತ್ತಲೂ ರೈತರು ಆಕರ್ಷಿತರಾಗುತ್ತಿದ್ದಾರೆ.
ವಾಣಿಜ್ಯ ಬೆಳೆಯಾಗಿರುವ ಹತ್ತಿ ಬೆಳೆ ಕುರಿತು ಉದಾಸೀನ ವ್ಯಕ್ತವಾಗುತ್ತಿದ್ದು, 6-7 ವರ್ಷದಿಂದ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಲೇ ಬರುತ್ತಿದೆ. ಬರೋಬರಿ 50 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ತಗ್ಗಿದೆ. ಈಗ ಅದು 7 ಸಾವಿರ ಹೆಕ್ಟೇರ್ ಪ್ರದೇಶವನ್ನೂ ದಾಟುತ್ತಿಲ್ಲ ಎಂಬುದೇ ಅಚ್ಚರಿ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 25,495 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹಾಕಿಕೊಳ್ಳಲಾಗಿತ್ತು. ಈವರೆಗೆ ಬರೀ 7,050 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ.27ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ಇದಕ್ಕೆ ಮಳೆ ಕೊರತೆಯೂ ಒಂದು ಕಾರಣವಾಗಿದೆ. ಕಳೆದ ವರ್ಷದ ಈ ಹೊತ್ತಿಗೆ 31,000 ಹೆಕ್ಟೇರ್ ಪ್ರದೇಶದಲ್ಲಿ 12,320 ಹೆಕ್ಟೇರ್ ಬಿತ್ತನೆಯಾಗಿತ್ತು. ಅದಕ್ಕಿಂತ ಎರಡ್ಮೂರು ವರ್ಷದಲ್ಲಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯಲಾಗಿತ್ತು.
ಉತ್ತಮ ಇಳುವರಿ ಪಡೆಯಲು ಕಪ್ಪು ಮಣ್ಣು ಅಥವಾ ಮೆಕ್ಕಲು ಮಣ್ಣು ಬೆಳೆಯುವ ಹತ್ತಿ ಮಳೆ ಆಧಾರಿತ ಬೆಳೆ. ಮಾರ್ಚ್-ಏಪ್ರಿಲ್‌ನಲ್ಲಿ ಬಿತ್ತನೆಗೆ ತಯಾರಿ ಮಾಡಿಕೊಂಡು ಜೂನ್-ಜುಲೈ ಬೇಸಾಯ ಮಾಡಲಾಗುತ್ತದೆ. ಬಳಿಕ 50, 80 ಮತ್ತು 110 ದಿನಗಳ ಬಳಿಕ ಲಘು ಪೋಷಕಾಂಶ ಹಾಗೂ ಯುರಿಯಾವನ್ನು ಹಂತ ಹಂತವಾಗಿ ನೀಡಲಾಗುತ್ತದೆ.
 ಬೆಳೆಯ ಆರಂಭದ 70 ದಿನದ ವರೆಗೆ ಹೊಲದಲ್ಲಿ ಕಳೆ ಬೆಳೆಯದಂತೆ ಎಚ್ಚರಿಕೆ ವಹಿಸಬೇಕು. ರಸ ಹೀರುವ ಕೀಟಗಳು, ಗುಲಾಬಿ ಕಾಯಿ ಕುಡಿಯ ಹಾವಳಿಯನ್ನು ತಡೆಯಲು ಸೂಕ್ತ ಕೀಟನಾಶಕ ಸಿಂಪಡಿಸಬೇಕು. ಇದೆಲ್ಲವೂ ರೈತರಿಗೆ ಶ್ರಮದಾಯಕ ಎನಿಸಿದೆ. ಹೆಚ್ಚು ಸಮಯವನ್ನೂ ಕೇಳುತ್ತದೆ. ಇಷ್ಟೆಲ್ಲ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ನ್ಯಾಯಯುತ ಬೆಲೆ ಸಿಗುವುದಿಲ್ಲ. ಕಳೆದ ವರ್ಷ ಕ್ವಿಂಟಾಲ್ ಹತ್ತಿಗೆ 5,000ರಿಂದ 5,500 ರೂ. ಕಡಿಮೆ ಬೆಲೆ ದೊರೆತ್ತಿತ್ತು. ಹೀಗಾಗಿ, ಹತ್ತಿ ಕೃಷಿಯಿಂದ ಕೃಷಿಕರು ದೂರವಾಗುತ್ತಿದ್ದಾರೆ.
ಹತ್ತಿ ಬೆಳೆ ಬದಲಿಗೆ ಮೆಕ್ಕೆ ಜೋಳದತ್ತ ರೈತರು ಸೆಳೆತ ಇತ್ತೀಚಿನ ವರ್ಷದಲ್ಲಿ ಹೆಚ್ಚಾಗಿದೆ. ಮಳೆ ಕೊರತೆ ನಡುವೆಯೂ ಪ್ರಸಕ್ತ ಸಾಲಿನಲ್ಲಿ 49,523 ಹೆಕ್ಟೇರ್ ಪ್ರದೇಶದ ಪೈಕಿ ಈಗಾಗಲೇ 47,405 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಮೂಲಕ ಶೇ. 95 ಗುರಿ ಸಾಧನೆ ಮಾಡಲಾಗಿದೆ.

ಖರ್ಚು ಕಡಿಮೆ, ಆದಾಯ ಜಾಸ್ತಿ

ಆಹಾರ ಬೆಳೆಯಾಗಿರುವ ಮೆಕ್ಕೆಜೋಳವನ್ನು ಎಚ್.ಡಿ.ಕೋಟೆ, ಸರಗೂರು ತಾಲೂಕಿನಲ್ಲೇ ಅಧಿಕ ಬೆಳೆಯುತ್ತಾರೆ. ಇದು ಜಿಲ್ಲೆಯಲ್ಲಿ ಮೇವಿಗಾಗಿ ಬೆಳೆಯುವ ಬೆಳೆಯಾಗಿದೆ ಎಂಬುದು ವಿಶೇಷ. ತೆನೆ ಬರುವವರೆಗೆ ಬೆಳೆಯುತ್ತಾರೆ. ಬಳಿಕ ಕಟಾವು ಮಾಡಿ ಮಾರಾಟ ಮಾಡುತ್ತಾರೆ. 
ಪ್ರತಿ ಟನ್ ಮೆಕ್ಕೆಜೋಳದ ಮೇವಿಗೆ ಕನಿಷ್ಠವೆಂದರೂ 2,700ರಿಂದ 3,000 ರೂ. ಬೆಲೆ ದೊರೆಯುತ್ತದೆ. ಒಂದು ಹೆಕ್ಟೇರ್‌ಗೆ ಕನಿಷ್ಠ ಎಂದರೂ 30 ಟನ್ ಮೇವು ಸಿಗುತ್ತದೆ. ಅದರಲ್ಲೂ 25 ಟನ್ ಗ್ಯಾರಂಟಿ. ಕೇವಲ 3 ತಿಂಗಳಿಗೆ ಹೆಕ್ಟೇರ್‌ಗೆ 60 ಸಾವಿರ ರೂ. ಕೈಗೆ ಸಿಗುತ್ತದೆ. 20 ಸಾವಿರ ರೂ. ಖರ್ಚು ಕಳೆದರೂ 40 ಸಾವಿರ ರೂ. ಉಳಿಯುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭದೊಂದಿಗೆ ಶ್ರಮ, ನಿರ್ವಹಣೆ ಕಡಿಮೆಯಾಗಿರುವುದರಿಂದ ಮೆಕ್ಕೆಜೋಳ ಕೃಷಿಕರಿಗೆ ಅಚ್ಚುಮೆಚ್ಚಾಗಿದೆ.
ಬೆಳೆ ಪರಿವರ್ತನೆಗಾಗಿ ಮೆಕ್ಕೆಜೋಳ ಬೆಳೆ ಸೂಕ್ತ. ಒಂದು ವರ್ಷದಲ್ಲೇ ಇದನ್ನು 3-4 ಬೆಳೆ ಬೆಳೆದು ರೈತರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಸುಲಭ- ಸರಳ ಬೆಳೆಯಾಗಿರುವ ಇದಕ್ಕೆ ಕಡಿಮೆ ಅವಧಿ ಸಾಕು. ಹತ್ತಿಗೆ ಹೆಚ್ಚು ಸಮಯ, ಕಡಿಮೆ ಬೆಲೆ, ಸಮಸ್ಯೆಗಳೂ ಹೆಚ್ಚು. ಹೀಗಾಗಿ, ಹತ್ತಿ ಈಗ ಬೇಡವಾದ ಬೆಳೆಯಂತಾಗಿದೆ.

ಎಂಎಸ್‌ಪಿಯಿಂದ ರಾಗಿ ಮೇಲೆಯೂ ಸೆಳೆತ:

ರಾಗಿ ಬಿತ್ತನೆ ಪ್ರದೇಶವೂ ವಿಸ್ತಾರವಾಗಿದೆ. ‘ಕನಿಷ್ಠ ಬೆಂಬಲ ಬೆಲೆ’ (ಎಂಎಸ್‌ಪಿ)ಯೋಜನೆಯಡಿ ಖರೀದಿಯಿಂದಾಗಿ ರಾಗಿ ಬೆಳೆಯಲು ರೈತರು ಹೆಚ್ಚು ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಸರ್ಕಾರದಿಂದ ಸಿಗುವ ಖಾತರಿಯ ಕನಿಷ್ಠ ದರ ದೊರೆಯುವ ವಿಶ್ವಾಸದಿಂದ ರಾಗಿಯತ್ತ ಬೆಳೆಯಲು ರೈತರು ಮುಂದಾಗಿದ್ದಾರೆ.
ಪ್ರಸಕ್ತ ವರ್ಷದಲ್ಲಿ 79,387 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಗೆ ಗುರಿ ಹಾಕಿಕೊಳ್ಳಲಾಗಿದೆ. ಕಳೆದ ವರ್ಷದ 62,080 ಹೆಕ್ಟೇರ್ ಪ್ರದೇಶದಲ್ಲಿ ರಾಗಿಯನ್ನು ಬೆಳೆಯಲಾಗಿತ್ತು. ಭತ್ತಕ್ಕೆ ಹೋಲಿಸಿದರೆ ರಾಗಿ ಬೆಳೆಗೆ ತುಂಬ ಕಡಿಮೆ ನೀರು ಸಾಕು. ಕಡಿಮೆ ಮಳೆ ಹಾಗೂ ಕಳಪೆ ಮಣ್ಣಿನಲ್ಲೂ ಇದು ಚೆನ್ನಾಗಿ ಬೆಳೆಯುತ್ತದೆ. ಅಂತರ್ಜಲ ಉಳಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸಲು ಇದು ಅತ್ಯುತ್ತಮ ಬೆಳೆಯಾಗಿದೆ. ಹೀಗಾಗಿ, ರಾಗಿ ರೈತರ ಮನಗೆದ್ದಿದೆ.

ತಂಬಾಕು ಬೆಳೆಯತ್ತ ಆಕರ್ಷಣೆ:

ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತಂಬಾಕು ಬೆಳೆಯತ್ತಲೂ ರೈತರ ಆಸಕ್ತಿ ಮತ್ತಷ್ಟು ಹೆಚ್ಚಾಗಿದ್ದು, ಅನೇಕ ನಿಯಮಗಳು, ನಿರ್ಬಂಧ , ಸಮಸ್ಯೆಗಳ ಹೊರತಾಗಿಯೂ ವರ್ಷದಿಂದ ವರ್ಷಕ್ಕೆ ಹೊಗೆ ಸೊಪ್ಪಿನ ಬಿತ್ತನೆ ಪ್ರದೇಶ ವಿಸ್ತಾರವಾಗುತ್ತಲೇ ಸಾಗಿದೆ. 
ಜಿಲ್ಲೆಯಲ್ಲಿ ಫ್ಲೂ-ಕ್ಯೂರ್ಡ್ ವರ್ಜಿನಿಯಾ (ಎಫ್‌ಸಿವಿ) ತಂಬಾಕು ಪ್ರಮುಖ ವಾಣಿಜ್ಯ ಬೆಳೆ. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ ತಾಲೂಕುಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 2026-27ನೇ ಸಾಲಿಗೆ ಕೇಂದ್ರ ತಂಬಾಕು ಮಂಡಳಿಯು ಕರ್ನಾಟಕದ ಉತ್ಪಾದನಾ ಮಿತಿಯನ್ನು 5.6 ಕೋಟಿ ಕೆ.ಜಿ.ಗೆ ಇಳಿಸಿದೆ. ಆದಾಗ್ಯೂ, ಜಿಲ್ಲೆಯಲ್ಲಿ 63,500 ಹೆಕ್ಟೇರ್ ಪ್ರದೇಶದಲ್ಲಿ ತಂಬಾಳು ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿತ್ತನೆಯಲ್ಲಿ 2ನೇ ಸ್ಥಾನದಲ್ಲಿರುವ ಭತ್ತ

ರಾಗಿ ನಂತರ ಈಗಲೂ ಹೆಚ್ಚು ಬಿತ್ತನೆ ಪ್ರದೇಶವನ್ನು ಆಕ್ರಮಿಸಿಕೊಂಡಿರುವುದು ಭತ್ತ ಬೆಳೆಯೇ. ಹೆಚ್ಚು ನೀರು ಬೇಡುವ ಈ ಬೆಳೆಯನ್ನು 77,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿರುವುದರಿಂದ ಜಿಲ್ಲೆಯಲ್ಲೇ ಬಿತ್ತನೆ ಪ್ರದೇಶದಲ್ಲಿ ಇದು 2ನೇ ಸ್ಥಾನದಲ್ಲಿ ಇದೆ. ರಾಗಿ ಮೊದಲ ಸ್ಥಾನದಲ್ಲಿದೆ. 
3, 4, 5ನೇ ಸ್ಥಾನದಲ್ಲಿ ತಂಬಾಕು, ಮುಸುಕಿನ ಜೋಳ, ರಾಗಿ ಬರುತ್ತದೆ. ಇದರೊಂದಿಗೆ ಏಕದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ದ್ವಿದಳ ಧಾನ್ಯಗಳಾದ ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಕಬ್ಬು ಬೆಳೆ ಬೆಳೆಯಲಾಗುತ್ತದೆ.
"

ಕಳೆದ 6-7 ವರ್ಷದಿಂದಲೂ ಹತ್ತಿ ಬಿತ್ತನೆ ಪ್ರದೇಶ ಕಡಿಮೆಯಾಗುತ್ತಿದೆ. ಅದರ ಬದಲು ಮುಸುಕಿನ ಜೋಳವನ್ನು ರೈತರು ಹೆಚ್ಚು ಬೆಳೆಯುತ್ತಿದ್ದಾರೆ. ಮೆಕ್ಕೆ ಜೋಳವನ್ನು ಆಹಾರಕ್ಕಿಂತ ಮೇವಿನಗಾಗಿ ಬಿತ್ತನೆ ಮಾಡಲಾಗುತ್ತಿದೆ. ಜತೆಗೆ, ಎಂಎಸ್‌ಪಿ ಅಡಿ ಖರೀದಿಯಿಂದ ರಾಗಿ, ಅಧಿಕ ಬೆಲೆಯ ಕಾರಣಕ್ಕೆ ತಂಬಾಕು ಬೆಳೆಯನ್ನೂ ಅಧಿಕವಾಗಿ ಬೆಳೆಯಲಾಗುತ್ತಿದೆ.

— ಕೆ.ಎಚ್.ರವಿ ಜಂಟಿ ನಿರ್ದೇಶಕ, ಕೃಷಿ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net