ಭೂಸ್ವಾಧೀನ ರೈತರಿಗೆ ಕೂಡಲೇ ಪರಿಹಾರ ನೀಡಿ: ರೈತರ ಆಗ್ರಹ

ರೈತರು
ರೈತರು
Published on

ಪ್ರಮುಖ ಮುಖ್ಯಾಂಶಗಳು

  • ವಾರದೊಳಗೆ ನೈಜ ಸಾಗುವಳಿದಾರರಿಗೆ ಪರಿಹಾರ ನೀಡಲು ಕೆಐಎಡಿಬಿ ಕ್ರಮ ಕೈಗೊಳ್ಳಬೇಕು.
  • ಪರಿಹಾರ ನೀಡುವ ವೇಳೆ ನಿಜವಾದ ಸಾಗುವಳಿದಾರರನ್ನು ನಿರ್ಲಕ್ಷ್ಯ
ಮೈಸೂರು: ಇಮ್ಮಾವು ಪ್ರದೇಶದಲ್ಲಿ ಭೂಸ್ವಾಧೀನಪಡಿಸಿಕೊಂಡಿರುವ ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ರೈತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಆಗ್ರಹಿಸಿದರು. 
ನಂಜನಗೂಡು ತಾಲೂಕಿನ ಇಮ್ಮಾವು ಪ್ರದೇಶದಲ್ಲಿ ಕೆಐಎಡಿಬಿ ಸುಮಾರು 589 ಎಕರೆ ಜಮೀನು ರೈತರಿಂದ ವಶಪಡಿಸಿಕೊಂಡಿದೆ. ಆದರೆ, ಪರಿಹಾರ ನೀಡುವ ವೇಳೆ ನಿಜವಾದ ಸಾಗುವಳಿದಾರರನ್ನು ನಿರ್ಲಕ್ಷಿಸಲಾಗಿದೆ. ಹೀಗಾಗಿ ಒಂದು ವಾರದೊಳಗೆ ನೈಜ ಸಾಗುವಳಿದಾರರಿಗೆ ಪರಿಹಾರ ನೀಡಲು ಕೆಐಎಡಿಬಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಮೇಟಗಳ್ಳಿಯ ಕೆಐಎಡಿಬಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೈಗಾರಿಕಾ ಉದ್ದೇಶಕ್ಕಾಗಿ ಈ ಜಮೀನು ಸ್ವಾಧೀನ ಪಡಿಸಿಕೊಂಡ ಬಳಿಕ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಕೆಐಎಡಿಬಿ ಸುಮಾರು 18 ಕೋಟಿ ರೂ. ಮಂಜೂರು ಮಾಡಿತ್ತು. 
ಆದರೆ, ಈ ವೇಳೆ ರಾಜಕೀಯ ಉದ್ದೇಶಗಳಿಂದಾಗಿ ನಿಜವಾದ ರೈತರ ಬದಲು ತಾಲೂಕಿನಲ್ಲಿಯೇ ಇಲ್ಲದ ಕೆಲವರು ಸೇರಿದಂತೆ ಇತರರಿಗೆ ಪರಿಹಾರ ವಿತರಿಸಲಾಗಿದೆ. ಇದರ ವಿರುದ್ಧ ರೈತ ಸಂಘ ಹೋರಾಟ ನಡೆಸಿತ್ತು. ಹೀಗಾಗಿ ನಿಜವಾದ ರೈತರನ್ನು ಗುರುತಿಸಿ ಅವರಿಗೆ ಪರಿಹಾರ ವಿತರಿಸುವ ಹೊಣೆ ಕೆಲ ಅಧಿಕಾರಿಗಳಿಗೆ ವಹಿಸಲಾಗಿದೆ. ಆದರೆ ಈ ವರೆಗೂ ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿದರು.
ಮೈಸೂರು ತಾಲೂಕಿನ ಕೋಚನಹಳ್ಳಿಯಲ್ಲಿ ಗಾಲ್ಫ್  ಕ್ಲಬ್‌ಗಾಗಿ ಭೂಮಿ ವಶಪಡಿಸಿಕೊಂಡ ಬಳಿಕ ನಿಯಮದಂತೆ ಪರಿಹಾರ ನೀಡಿಲ್ಲ. ಈ ಕುರಿತು ಚಳವಳಿ ನಡೆಸಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಅದು ಇನ್ನೂ ಈಡೇರಿಲ್ಲ. ಇಲ್ಲಿಯೂ ಕೆಐಎಡಿಬಿ ಹೊಣೆಯಾಗಿರುವುದರಿಂದ ಧರಣಿ ವೇಳೆ ಈ ಕುರಿತ ಬೇಡಿಕೆಯನ್ನೂ ಮುಂದಿಡಲಾಗುವುದು ಎಂದರು.
ಹೋರಾಟಗಾರ ಉಗ್ರ ನರಸಿಂಹೇಗೌಡ ಮಾತನಾಡಿ, ಮೈಸೂರು ತಾಲೂಕಿನ ವರುಣ ಕ್ಷೇತ್ರದಲ್ಲಿ ನಿಮ್ಹಾನ್ಸ್ ಆಸ್ಪತ್ರೆಗೆ ರೈತರ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದು ಸರಿಯಲ್ಲ. ಇದು ಶೀತದ ನೆಲ ಆಗಿದ್ದು, ಕಟ್ಟಡ ನಿರ್ಮಾಣಕ್ಕೆ ಸೂಕ್ತವಲ್ಲ. ಇತರೆಡೆ ಭೂಮಿ ನೀಡಬಹುದಾಗಿತ್ತು ಎಂದು ಹೇಳಿದರು. ಮುಖಂಡರಾದ ಪಿ. ಮರಂಕಯ್ಯ, ಪ್ರೇಮ್‌ರಾಜ್, ಕೋಚನಹಳ್ಳಿ ಮಹದೇವ್, ಶಿವಣ್ಣ ನಾಯಕ, ಶ್ರೀಕಂಠ, ಮಹೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net