ನಂಜನಗೂಡು : ತಾಲೂಕಿನ ಮುದ್ದಹಳ್ಳಿ, ಎಲಚಗೆರೆ, ಸಿಂಧುವಳ್ಳಿ ಪುರ ಬಳಿಯ 448 ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿ ಬಲವಂತದಿಂದ ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ಏ.6ರಂದು ಗುಂಡ್ಲುಪೇಟೆ- ಊಟಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಿರಮಳ್ಳಿ ಮಂಜುನಾಥ್ ತಿಳಿಸಿದ್ದಾರೆ.
ಕೆಐಎಡಿಬಿ ಹಾಗೂ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಸಕ್ರಿಯವಾಗಿ ಕೃಷಿಯಲ್ಲಿ ತೊಡಗಿರುವ ರೈತರ ಜಮೀನನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ. ಈ ಭಾಗದ ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ. ಅವರನ್ನೆಲ್ಲ ಬಲವಂತವಾಗಿ ದಲ್ಲಾಳಿಗಳು ಆಮಿಷ ಒಡ್ಡಿ ಜಮೀನು ಮಾರಲು ಪ್ರೇರೇಪಿಸುತ್ತಿದ್ದಾರೆ. ಇದರಲ್ಲಿ ಕೆಲವು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕೂಡಲೆ ಸ್ಥಳಿಯ ಶಾಸಕರು ಇದರ ಬಗ್ಗೆ ಗಮನ ಹರಿಸಿ, ರೈತರ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡಬೇಕು. ಏ.6 ರಂದು ನಡೆಯುವ ಹೋರಾಟದಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಮಂಜು ಕಿರಣ್, ಮುದ್ದಹಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.