ತಿ.ನರಸೀಪುರ: ತಾಲೂಕಿನ ತಲಕಾಡು ಬಳಿಯಿರುವ ಪರಿಣಾಮಿಪುರ ಗ್ರಾಮದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕ ಮೃತಪಟ್ಟಿದ್ದಾನೆ.
ಅಡಿಗೆ ಗುರುಮಲ್ಲಪ್ಪ(68) ಮೃತರು. ಪ್ರದೀಪ್ ಅವರ ಕಬ್ಬಿನ ಗದ್ದೆಯಲ್ಲಿ ಗುರುಮಲ್ಲಪ್ಪ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ಜಮೀನಿನಲ್ಲಿ ಒಬ್ಬರೇ ಇದ್ದುದ್ದರಿಂದ ತೀವ್ರ ಗಾಯದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರನ್ನು ಗುದ್ದಿ ಕೆಳಗೆ ಕೆಡವಿರುವ ಕಾಡಾನೆಯು ಸೊಂಟಕ್ಕೆ ದಂತಗಳಿಂದ ತಿವಿದು ಸಾಯಿಸಿದೆ.
ಪೊಲೀಸರೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪ್ರಾದೇಶಿಕ ಅರಣ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತರು ಮತ್ತು ಗ್ರಾಮಸ್ಥರು, ಮಳವಳ್ಳಿ ಕಡೆಯಿಂದ ಕಳೆದ ರಾತ್ರಿ ಅಲ್ಲಿನ ಅರಣ್ಯಾಧಿಕಾರಿಗಳು ಓಡಿಸಿದ ಒಂಟಿ ಆನೆಯ ಬಗ್ಗೆ ಮಾಹಿತಿ ಇದ್ದರೂ ನಿರ್ಲಕ್ಷಿಸಿದ್ದಕ್ಕೆ ಒಬ್ಬರ ಸಾವಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಡಿಸಿಎಫ್ ಆಗಮಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಲ್ಲಿಯವರೆಗೂ ಮೃತದೇಹ ತೆಗೆಯಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್, ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಹಾಗೂ ಪ್ರಾದೇಶಿಕ ಅರಣ್ಯಾಧಿಕಾರಿ ಉಮೇಶ್ ಅವರು ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿ, ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು.
ಕಾಡಾನೆ ದಾಳಿಯಿಂದಾಗಿ ತಲಕಾಡು ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಜನತೆ ಆತಂಕಕೊಳಗಾಗಿದ್ದಾರೆ. ಅರಣ್ಯ ಅಧಿಕಾರಿಗಳು ಕಬ್ಬಿನ ಜಮೀನಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗೆ ಶೋಧ ಕಾರ್ಯವನ್ನು ಕೈಗೊಂಡಿದ್ದಾರೆ.