ಮೈಸೂರು ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಮೈಸೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ತಪಾಸಣೆ ನಡೆಸಿದರು.
ಮೈಸೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ತಪಾಸಣೆ ನಡೆಸಿದರು.
Published on
ಮೈಸೂರು: ನಗರದ ಎರಡು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದು ಆತಂಕ ಸೃಷ್ಟಿಸಿದ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಗುರುವಾರ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಆತಂಕ ವಾತಾವರಣ ನಿರ್ಮಾಣಗೊಂಡಿತ್ತು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಇ-ಮೇಲ್ ವಿಳಾಸಕ್ಕೆ ಮಧ್ಯರಾತ್ರಿ 1.59ಕ್ಕೆ ಇ-ಮೇಲ್ ಬಂದಿದ್ದು, ‘ಮಧ್ಯಾಹ್ನ 1.15 ರಿಂದ 3 ಗಂಟೆಯ ನಡುವೆ ನ್ಯಾಯಾಲಯದಲ್ಲಿ 13 ವಿಷಾನಿಲ ಹಾಗೂ ಆರ್‌ಡಿಎಕ್ಸ್ ಬಾಂಬ್‌ಗಳನ್ನು ಸ್ಫೋಟಿಸಲಾಗುವುದು. ಮಧ್ಯಾಹ್ನದೊಳಗೆ ನ್ಯಾಯಾಧೀಶರು ಮತ್ತು ಅಮಾಯಕ ಜನರನ್ನು ಸ್ಥಳಾಂತರಿಸಬೇಕು’ ಎಂದು ಇ-ಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿತ್ತು.
ನ್ಯಾಯಾಲಯದ ಸಿಬ್ಬಂದಿ ವಾಡಿಕೆಯಂತೆ ಇ-ಮೇಲ್‌ಗಳನ್ನು ಪರಿಶೀಲಿಸಿದಾಗ ಬಾಂಬ್ ಬೆದರಿಕೆ ತಿಳಿದು ಬಂದಿದ್ದು, ತಕ್ಷಣ ಅವರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ಅವರಿಗೆ ಮಾಹಿತಿ ನೀಡಿದರು. ಅವರು ಈ ವಿಷಯವನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಗಮನಕ್ಕೆ ತಂದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೃಷ್ಣರಾಜ ಬುಲೇವಾರ್ಡ್ ಹಾಗೂ ಮಳಲವಾಡಿಯಲ್ಲಿರುವ ನ್ಯಾಯಾಲಯ ಸಂಕೀರ್ಣಗಳಿಗೆ ಬಾಂಬ್ ಸ್ಕ್ವಾಡ್‌ಗಳು ಮತ್ತು ಶ್ವಾನ ದಳಗಳನ್ನು ಕಳುಹಿಸಲಾಯಿತು.
ಮೈಸೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ತಪಾಸಣೆ ನಡೆಸಿದರು.

ವಕೀಲರು, ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ನ್ಯಾಯಾಲಯದ ಆವರಣ ಪ್ರವೇಶಿಸುವ ಮೊದಲೇ ಬಾಂಬ್ ಪತ್ತೆ ದಳವು ಎರಡೂ ನ್ಯಾಯಾಲಯ ಸಂಕೀರ್ಣಗಳಲ್ಲಿನ 53 ನ್ಯಾಯಾಲಯ ಸಭಾಂಗಣಗಳು, ಕ್ಯಾಂಟೀನ್‌ಗಳು, ಗ್ರಂಥಾಲಯಗಳು, ಸಭಾಂಗಣಗಳು, ಕಚೇರಿ ಕೊಠಡಿಗಳು, ಪಾರ್ಕಿಂಗ್ ಪ್ರದೇಶಗಳು ಸೇರಿದಂತೆ ಎಲ್ಲ ಪ್ರಮುಖ ಸ್ಥಳಗಳ ಪರಿಶೀಲನೆಯನ್ನು ಪೂರ್ಣಗೊಳಿ ಸಿದರು. ಕೂಲಂಕಷ ಪರಿಶೀಲನೆಯ ನಂತರ ಇದು ಹುಸಿ ಬಾಂಬ್ ಸಂದೇಶ ಎಂಬುದು ದೃಢಪಟ್ಟಿತು.
ತೀವ್ರ ತಪಾಸಣೆ : ಹುಸಿ ಬಾಂಬ್ ಕರೆಯ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ನ್ಯಾಯಾಲಯಕ್ಕೆ ಆಗಮಿಸಿದ ಪ್ರತಿಯೊಬ್ಬರ ಹಾಗೂ ವಾಹನಗಳ ತಪಾಸಣೆ ಕಾರ್ಯ ನಡೆಯಿತು. ಪ್ರತಿಯೊಂದು ವಾಹನಗಳಲ್ಲಿದ್ದ ಲಗ್ಗೇಜ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಲಾ ುತು.

ಎಂದಿನಂತೆ ಕಾರ್ಯಕಲಾಪ

ನಗರದ ನ್ಯಾಯಾಲಯಕ್ಕೆ ಜ.5 ರಂದು ಸಹ ಬಾಂಬ್ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದು ದಿನವಿಡೀ ನ್ಯಾಯಾಲಯದ ಕಾರ್ಯಕಲಾಪ ಬಂದ್ ಆಗಿತ್ತು. ಅದೇ ರೀತಿ ಈ ಬಾರಿಯೂ ಕಾರ್ಯಕಲಾಪ ಬಂದ್ ಆಗಬಾರದು ಎಂಬ ಉದ್ದೇಶದಿಂದ ಬೆಳಗ್ಗೆ 6 ರಿಂದಲೇ ತಪಾಸಣಾ ಕಾರ್ಯ ಕೈಗೊಂಡು ಹುಸಿಬಾಂಬ್ ಕರೆ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಬೆಳಗ್ಗೆ ಎಂದಿನಂತೆ ಕಾರ್ಯಕಲಾಪ ಪ್ರಾರಂಭಿಸಲಾಯಿತು.

2016ರಲ್ಲಿ ನಡೆದಿತ್ತು ಸ್ಫೋಟ

ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಶೌಚಗೃಹದಲ್ಲಿ 1 ಆಗಸ್ಟ್ 2016 ರಂದು ಬಾಂಬ್ ಸ್ಫೋಟಗೊಂಡಿತ್ತು. ಶೌಚಗೃಹದಲ್ಲಿ ಇರಿಸಿದ್ದ ಬಾಂಬ್ ಹೆಚ್ಚು ತೀವ್ರತೆಯಿಂದ ಕೂಡಿರಲಿಲ್ಲ. ಸ್ಫೋಟದ ಪರಿಣಾಮ ಶೌಚಾಲಯದ ಗೋಡೆ, ಮೇಲ್ಛಾವಣಿ ಹಾಗೂ ಗಾಜುಗಳಿಗೆ ಹಾನಿಯಾಗಿತ್ತು. ಮೂವರಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿತ್ತು. ಪ್ರಕರಣವನ್ನು ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿಕೊಂಡು ತಮಿಳುನಾಡಿನ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇವರಿಗೆ ಅಲ್- ಖೈದಾ ಪ್ರೇರಿತ ಸಂಘಟನೆಯೊಂದಿಗೆ ಸಂಪರ್ಕ ಇರುವುದು ತನಿಖೆಯಿಂದ ದೃಢಪಟ್ಟಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net