ಸುತ್ತೂರಿನಲ್ಲಿ ಮೇಳೈಸಿದ ಜಾತ್ರಾ ಸಂಭ್ರಮ

 ಸುತ್ತೂರು ಜಾತ್ರೆ
ಸುತ್ತೂರು ಜಾತ್ರೆ
Published on

ಪ್ರಮುಖ ಮುಖ್ಯಾಂಶಗಳು

  • ಐದು ದಿನಗಳ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
  • ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಮಾಗಮ

ಮಂಜುನಾಥ ತಿಮ್ಮಯ್ಯ ಭೋವಿ, ಮೈಸೂರು

‘ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ಮೇಲು’ ಎಂದೇ ಪ್ರಸಿದ್ಧಿಯಾಗಿರುವ ಜನಮನದ ಭಕ್ತಿಕೇಂದ್ರ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವದ ಸಂಭ್ರಮ ಮೇಳೈಸಿತು. 
ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದ ಐದು ದಿನಗಳ ಜಾತ್ರೆಯ ಸಡಗರದ ಅಂಕದ ಪರದೆ ಗುರುವಾರ ತೆರೆದುಕೊಂಡಿತು. 
ಈ ಜಾತ್ರೆ ವಿಭಿನ್ನ ಹಾಗೂ ವಿಶಿಷ್ಟವೇ ಸರಿ. ಇಲ್ಲಿ ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕತೆಯ ಸಮಾಗಮವೇ ಕಪಿಲೆಯ ದಡದಲ್ಲಿ ಏರ್ಪಟ್ಟಿತ್ತು. ಇದರೊಂದಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನವೂ ಇಲ್ಲಿತ್ತು. ಇಲ್ಲಿನ ಪ್ರಮುಖ ರಸ್ತೆಗಳು ಹಾಗೂ ಮನೆಗಳು, ವಾಣಿಜ್ಯ ಮಳಿಗೆಗಳು ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿದ್ದವು. 

ಕೃಷಿ ಮೇಳದ ಸೊಬಗು: 

ಶ್ರೀಮಠದ ಆವರಣದಲ್ಲಿ ಹಾಕಿದ್ದ ಸಭಾವೇದಿಕೆಯಲ್ಲಿ ಸಂಜೆ ವಸ್ತು ಪ್ರದರ್ಶನ, ಕೃಷಿ ಮೇಳ ಮತ್ತು ಸಾಂಸ್ಕೃತಿಕ ಮೇಳಕ್ಕೆ ಸಂಸದ ಜಗದೀಶ ಶೆಟ್ಟರ್ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಸಾಕ್ಷಿಯಾದರು.
ಉದ್ಘಾಟನೆಗೊಂಡ ಕೃಷಿ ಮೇಳದಲ್ಲಿ ಬೇಸಾಯ ಸಂಸ್ಕೃತಿ ಗರಿಬಿಚ್ಚಿತು. ಇದರೊಂದಿಗೆ ವಸ್ತು ಪ್ರದರ್ಶನದಲ್ಲಿ ವಿವಿಧ ಬಗೆ ವಸ್ತುಗಳ ಪ್ರದರ್ಶನವೂ ಕಣ್ಮನ ಸೆಳೆಯಿತು.
ಈ ಹಿಂದೆ ಭಕ್ತಿ, ಭಜನೆಗೆ ಸೀಮಿತವಾಗಿದ್ದ ಜಾತ್ರೆಗೆ ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ಲೋಕದ ಅನಾವರಣಕ್ಕೂ ವೇದಿಕೆ ಕಲ್ಪಿಸಿಕೊಡಲಾಗಿದೆ. ಗ್ರಾಮೀಣ ಕಲೆ ರಂಗೋಲಿ, ಸೋಬಾನೆಪದ ಸ್ಪರ್ಧೆಗೂ ಚಾಲನೆ ದೊರೆಯಿತು. 
ಇದರೊಂದಿಗೆ ಆರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹೀಗೆ ಹಲವಾರು ವೈವಿಧ್ಯಪೂರ್ಣ ಕಾರ್ಯಕ್ರಮಗಳು ತೆರೆದುಕೊಂಡವು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಸಮಸ್ತ ಭಕ್ತರಿಗೂ ನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ, ಸಂಸ್ಥೆಯ ಉದ್ಯೋಗಿಗಳಿಗೆ, ಗಣ್ಯರಿಗೆ ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿದೆ. 

ಕೃಷಿ ಮೇಳದಲ್ಲಿ ವೈವಿಧ್ಯಮಯ ಪುಷ್ಪ ಪ್ರದರ್ಶನ 

ಕೃಷಿ ಮೇಳ ಕಣ್ಮನ ಸೆಳೆಯಿತು. ಇದು ಕೃಷಿ ಕ್ಷೇತ್ರದಲ್ಲಿನ ಪ್ರಮುಖ ತಂತ್ರಜ್ಞಾನ, ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಯನ್ನೂ ಪರಿಚಯಿಸಿತು. 2026ರ ಅಂತಾರಾಷ್ಟ್ರೀಯ ರೈತ ಮಹಿಳಾ ವರ್ಷ ಎಂದು ಘೋಷಣೆ ಮಾಡಿರುವುದರ ಪ್ರಯುಕ್ತ ‘ಮುಂದಿನ ಪೀಳಿಗೆಯ ಕೃಷಿಯಲ್ಲಿ ಮಹಿಳೆಯ ಪಾತ್ರ’ ಶೀರ್ಷಿಕೆಯಡಿ ಕೃಷಿಮೇಳ ಏರ್ಪಡಿಸಲಾಗಿದೆ.

 ವೈವಿಧ್ಯಮಯ ಪುಷ್ಪ ಪ್ರದರ್ಶನ ಆಕರ್ಷಣೆ

ಮೈಸೂರಿನ ಪ್ರಾದೇಶಿಕ ಬೆಳೆಗಳಾದ(ಜಿಐ) ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ ಹಾಗೂ ಈರನಗೆರೆ ಬದನೆ ಬೆಳೆಗಳ ಪ್ರಾತ್ಯಕ್ಷಿಕೆ ಇಲ್ಲಿತ್ತು. ಬಳ್ಳಿ ಸಸಿಗಳ ಲೋಕ, ಕಸಿ ಟೊಮ್ಯಾಟೊ, ಬದನೆ ಬೆಳೆ ಹಾಗೂ ವೈವಿಧ್ಯಮಯ ಪುಷ್ಪ ಪ್ರದರ್ಶನ ಆಕರ್ಷಿಸಿತು. 

ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ

ಒಂದು ಎಕರೆ ಕೃಷಿ ಬ್ರಹ್ಮಾಂಡ, ನೆರಳುಮನೆಯಲ್ಲಿ ಬೆಳೆದ ಹಲವಾರು ದೇಸಿ ಹಾಗೂ ವಿದೇಶಿ ತರಕಾರಿಗಳು, ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ವಾಣಿಜ್ಯ ಬೆಳೆಗಳು, ಮೇವಿನ ಬೆಳೆಗಳು, ವಿವಿಧ ಫಲಪುಷ್ಪಗಳು, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ, ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಅನುಸರಿಸಿ ಬೆಳೆದಿರುವ ಸುಮಾರು 300 ಬೆಳೆಗಳು ಹಾಗೂ ವಿವಿಧ ತಳಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.
ವಿವಿಧ ಇಲಾಖೆಗಳು, ವಿಶ್ವವಿದ್ಯಾಲಯಗಳು ಹಾಗೂ ಖಾಸಗಿ ಉಪಕರಣಗಳ ಮಾರಾಟಗಾರರು ಪಾಲ್ಗೊಂಡು ಕೃಷಿ ಕುರಿತು ಮಾಹಿತಿಯೊಂದಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಿದರು. 
ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯೂ ಇತ್ತು. ದೇಸಿ ತಳಿಗಳ ಹಸು, ಕುರಿ, ಮೇಕೆ, ಕೋಳಿಗಳ ಪ್ರದರ್ಶನ ಇತ್ತು. 

ವಸ್ತುಪ್ರದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಮಾಹಿತಿ 

ವಸ್ತುಪ್ರದರ್ಶನ ಸಹ ಆಕರ್ಷಿಸಿತು. ಈ ಸಲ ವಿಶೇಷವಾಗಿ ಕೃತಕ ಬುದ್ಧಿಮತ್ತೆ ಕುರಿತು ಮಾಹಿತಿ ನೀಡಲಾಯಿತು.
ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಗ್ರಾಮೀಣ ಕರಕುಶಲ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇಲ್ಲಿತ್ತು.
ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು ಗಮನ ಸೆಳೆದವು. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನ ಅನೇಕ ಮಾಹಿತಿಯನ್ನು ಒದಗಿಸಿದವು.
ಕೃಷಿ ವಿಜ್ಞಾನ ಕೇಂದ್ರ ಸಂಶೋಧನೆ ಆಧಾರಿತ ಜ್ಞಾನ ಮತ್ತು ಸಲಹೆಗಳು ನೀಡಲಾಯಿತು. ಜೆಎಸ್‌ಎಸ್-ಸ್ಟೆಪ್ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಪರಿಣತಿಯನ್ನು ಹಂಚಿಕೊಳ್ಳಲಾಯಿತು. ಸಹಕರಣೆ, ನವೀನತೆ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸಿ ರೈತರಿಗೆ ಪ್ರಯೋಜನಕರವಾಗಿದ್ದು, ದೇಶದ ಕೃಷಿ ಬೆಳವಣಿಗೆಗೂ ಸಹಕಾರಿಯಾಗಿದೆ.

 ಸಾಂಸ್ಕೃತಿಕ ಸಿಂಚನ

ಗದ್ದುಗೆಯ ಆವರಣದಲ್ಲಿ ನಗರಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕ ಪ್ರದರ್ಶನಗೊಂಡವು.

 ವರ್ಣರಂಜಿತ ಕಲಾಪ್ರದರ್ಶನ 

ರಾಜ್ಯದ ವಿವಿಧ ಕಲಾತಂಡಗಳ ವರ್ಣರಂಜಿತ ಕಲಾಪ್ರದರ್ಶನ ನೀಡಿದವು. ವೀರಭದ್ರ ಕುಣಿತ, ಡೊಳ್ಳುಕುಣಿತ ಸೇರಿದಂತೆ ಅನೇಕ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net