ಸವಾಲುಗಳನ್ನು ಎದುರಿಸಿ ಶಿಕ್ಷಣ ಪಡೆಯಿರಿ: ಸಚಿವ ಸತೀಶ್ ಜಾರಕಿಹೊಳಿ ಸಲಹೆ

 ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು. ಸತೀಶ್ ಜಾರಕಿಹೊಳಿ, ಅನಿಲ್‌ಚಿಕ್ಕಮಾದು, ಸಿ.ಎನ್.ಮಂಜೇಗೌಡ,  ಕಳಲೇ ಕೇಶವಮೂರ್ತಿ,  ಲೋಕೇಶ್ ಪಿಯಾ, ದೇವರಾಜು ಟಿ.ಕಾಟೂರು,  ಎಸ್.ಸಿ.ಬಸವರಾಜು ಇನ್ನಿತರರಿದ್ದರು.
ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು. ಸತೀಶ್ ಜಾರಕಿಹೊಳಿ, ಅನಿಲ್‌ಚಿಕ್ಕಮಾದು, ಸಿ.ಎನ್.ಮಂಜೇಗೌಡ, ಕಳಲೇ ಕೇಶವಮೂರ್ತಿ, ಲೋಕೇಶ್ ಪಿಯಾ, ದೇವರಾಜು ಟಿ.ಕಾಟೂರು, ಎಸ್.ಸಿ.ಬಸವರಾಜು ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾಥಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಸಲಹೆ
  • ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಮೈಸೂರು: ಶೋಷಿತ ಸಮಾಜಕ್ಕೆ ಸಮಸ್ಯೆಗಳು ಸಹ ಬಾಲದಂತೆ ಹಿಂಬಾಲಿಸುತ್ತವೆ. ಇವುಗಳನ್ನು ಮೆಟ್ಟಿನಿಂತು ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ, ಸತೀಶ್ ಜಾರಕಿಹೊಳಿ ಫೌಂಡೇಷನ್ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗ್‌ಔರವಿಸಿ ಮಾತನಾಡಿದರು.
ಸಮಸ್ಯೆ, ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ಬೆಳೆಯಬೇಕು. ಇದಕ್ಕೆ ನಮ್ಮೆಲ್ಲರಿಗೂ ಡಾ.ಬಿ.ಆರ್.ಅಂಬೇಡ್ಕರ್ ಮಾದರಿ. ಬಾಬಾಸಾಹೇಬರ ಕುರಿತು ಅಧ್ಯಯನ ಮಾಡಿ ಅವರ ಆಲೋಚನೆ, ಚಿಂತನೆ, ಆದರ್ಶವನ್ನು ಅರಿತುಕೊಳ್ಳಬೇಕು. ಇದು ನಾಯಕನಾಗಿ, ರಾಜಕಾರಣಿಯಾಗಿ ಅಧಿಕಾರಿಯಂತಹ ಉನ್ನತ ಸ್ಥಾನಕ್ಕೇರಲು ಮೆಟ್ಟಿಲಾಗಲಿದೆ ಎಂದರು.
ನಮ್ಮ ಬದುಕು ನಮ್ಮ ಕೈಯಲ್ಲಿ ಇದೆ. ಇಚ್ಛಾಶಕ್ತಿಇದ್ದರೆ ಎಂತಹ ಕಠಿಣ ಸಮಸ್ಯೆಗಳನ್ನಾದರೂ ಎದುರಿಸಿ ಮುಂದುವರಿಯಬಹುದು. ಇತಿಹಾಸ ಅರಿತರೆ ಬದುಕಲು ಸಾಧ್ಯ. ಶಿಕ್ಷಣ, ಹೋರಾಟ, ಸಂಘಟನೆ ಮೂಲಕ ಉಜ್ವಲ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲಾ, ಹಾಸ್ಟೆಲ್ ನಿರ್ಮಾಣಕ್ಕಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಾಲ್ಮೀಕಿ ಶಿಕ್ಷಣ ಟ್ರಸ್ಟ್‌ನ ಹೆಸರಿಗೆ 5 ಎಕರೆ ಜಾಗ ಮತ್ತು ಟಿಎಸ್‌ಪಿ ಯೋಜನೆಯಡಿ 25 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ನೀಡಲಾಗಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಇದೇ ರೀತಿಯ ಕೆಲಸ ಬೇರೆ ಜಿಲ್ಲೆಯಲ್ಲೂ ಆಗಬೇಕಿದೆ ಎಂದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಶಿಕ್ಷಣದಿಂದ ಮಾತ್ರ ವ್ಯಕ್ತಿ, ಮನೆ, ಸಮಾಜ ಮತ್ತು ದೇಶ ಪ್ರಗತಿಯಾಗಲು ಸಾಧ್ಯ. ವಿದ್ಯಾವಂತರಾದರೆ ಸೌಲಭ್ಯ-ಹಕ್ಕು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉತ್ತಮವಾಗಿ ಓದಬೇಕು ಎಂದರು.
ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಮೈಸೂರು ನಗರದಲ್ಲಿ ಒಂದೇ ಎಸ್‌ಟಿ ಹಾಸ್ಟೆಲ್ ಇದೆ. ಇದು ಸಾಕಾಗುತ್ತಿಲ್ಲ. ಇನ್ನೂ 2 ಹಾಸ್ಟೆಲ್‌ಗಳು ಬೇಕಾಗಿವೆ. ಜಾಗ ಗುರುತಿಸಿ, ಹಾಸ್ಟೆಲ್ ನಿರ್ಮಾಣಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ಅನುಮೋದನೆ ಕೊಡಿಸಬೇಕು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ 560 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನೂತನ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಶಾಸಕ ಡಿ.ರವಿಶಂಕರ್, ಎಂಎಲ್ಸಿ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಕಳಲೇ ಕೇಶವಮೂರ್ತಿ, ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ವೇದಿಕೆಯ ಅಧ್ಯಕ್ಷ ದೇವರಾಜು ಟಿ.ಕಾಟೂರು, ಮುಖಂಡರಾದ ಎಸ್.ಸಿ.ಬಸವರಾಜು, ಎಂ.ಸಿ. ದೊಡ್ಡ ನಾಯಕ, ಹೊನ್ನ ನಾಯಕ, ಉದ್ಬೂರು ಕೃಷ್ಣ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net