ಭಾರತೀಯ ಭಾಷಾ ಸಂಸ್ಥಾನದಲ್ಲಿ ಕುಲಶಾಸ್ತ್ರೀಯ ಮತ್ತು ಸಂಸ್ಕೃತಿ ದಾಖಲಿಕರಣ ಶಿಬಿರ

ಮೈಸೂರು ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆಯೋಜಿಸಿರುವ ಕುಲಶಾಸ್ತ್ರೀಯ ಹಾಗೂ ಸಂಸ್ಕೃತಿ ದಾಖಲಿಕರಣ ಕುರಿತ  ಶಿಬಿರವನ್ನು ಭಾನುವಾರ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗಂಗಾಧರ್ ಉದ್ಘಾಟಿಸಿದರು. ಡಾ.ಎ.ದೇವರಾಜು, ಅಮಿತಾಬ್ ಪಾಂಡೆ, ಪ್ರೊ.ಸುನೀತಾ ರೆಡ್ಡಿ, ಅಶೋಕ್‌ವರ್ಧನ್ ಇದ್ದರು.
ಮೈಸೂರು ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆಯೋಜಿಸಿರುವ ಕುಲಶಾಸ್ತ್ರೀಯ ಹಾಗೂ ಸಂಸ್ಕೃತಿ ದಾಖಲಿಕರಣ ಕುರಿತ ಶಿಬಿರವನ್ನು ಭಾನುವಾರ ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗಂಗಾಧರ್ ಉದ್ಘಾಟಿಸಿದರು. ಡಾ.ಎ.ದೇವರಾಜು, ಅಮಿತಾಬ್ ಪಾಂಡೆ, ಪ್ರೊ.ಸುನೀತಾ ರೆಡ್ಡಿ, ಅಶೋಕ್‌ವರ್ಧನ್ ಇದ್ದರು.
Published on
ಮೈಸೂರು: ಯಾವುದೇ ಒಂದು ಸಂಸ್ಕೃತಿ ಮತ್ತು ಜನಾಂಗದ ಬಗ್ಗೆ ಸಮರ್ಪಕವಾಗಿ ದಾಖಲೀಕರಣ ಮಾಡುವುದರಿಂದ ನಮ್ಮ ಮೂಲಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ದಕ್ಷಿಣಾ ಪ್ರಾದೇಶಿಕ ಕೇಂದ್ರ, ಆಂಥ್ರೂಪ್ಸ್ ಇಂಡಿಯಾ ಫೌಂಡೇಷನ್ ಸಹಯೋಗದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಕುಲಶಾಸ್ತ್ರೀಯ ಹಾಗೂ ಸಂಸ್ಕೃತಿ ದಾಖಲಿಕರಣ ಕುರಿತ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಸಂಸ್ಕೃತಿಗೂ ಅದರದ್ದೆ ಆದ ಮೌಲ್ಯವಿದೆ. ಹೀಗಾಗಿ ದಾಖಲೀಕರಣ ಮಾಡುವವರು ಪ್ರತಿಯೊಂದು ಕುಲ-ಜನಾಂಗ, ಸಂಸ್ಕೃತಿಯ ಕಥೆ, ಇತಿಹಾಸ ಎಲ್ಲವನ್ನೂ ಸಮಗ್ರವಾಗಿ ಕೇಳಿಸಿಕೊಳ್ಳಬೇಕು. ಏಕೆಂದರೆ ದಾಖಲೀಕರಣವು ಭವಿಷ್ಯದ ಸಂಪತ್ತಾಗಿದ್ದು, ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಮತ್ತು ಸಣ್ಣ-ಸಣ್ಣ ಪ್ರಮಾಣದಲ್ಲಿ ಇರುವ ಜನಾಂಗಗಳ ಆಚರಣೆ, ಸಂಸ್ಕೃತಿಯನ್ನು ಹೊರ ಪ್ರಪಂಚಕ್ಕೆ ತೋರ್ಪಡಿಸುವಲ್ಲಿ ಮಹತ್ವದ ಪಾತ್ರವಹಿಸಬೇಕಾಗುತ್ತದೆ. ಕುಲಶಾಸ್ತ್ರೀಯ ಹಾಗೂ ಸಂಸ್ಕೃತಿಯ ದಾಖಲೀಕರಣ ಕೇವಲ ಭೂತಕಾಲವನ್ನು ಉಳಿಸುವುದಲ್ಲ, ಬದಲಾಗಿ ಅದು ಭವಿಷ್ಯವನ್ನು ರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತಿಯ ದಾಖಲೀಕರಣ ಕೇವಲ ಶೈಕ್ಷಣಿಕ ಕಾರ್ಯವಲ್ಲ. ಅದು ನಾಗರಿಕರೆಲ್ಲರ ಜವಾಬ್ದಾರಿಯಾಗಿದೆ. ಅನೇಕ ಸಮುದಾಯಗಳು ಇಂದಿಗೂ ಕೂಡ ಬೆಳಕಿಗೆ ಬಂದಿಲ್ಲ, ಆದರೆ ಅವರ ಬಳಿ ಶ್ರೀಮಂತ ಪರಂಪರೆ ಇದೆ. ಅದನ್ನು ದಾಖಲಿಸದಿದ್ದರೆ ಮುಂದಿನ ಪೀಳಿಗೆಗೆ ಅದು ತಿಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಸಂಸ್ಕೃತಿಯನ್ನು ದಾಖಲಿಸುವಾಗ, ಕೇವಲ ಮಾಹಿತಿಯನ್ನು ಸಂಗ್ರಹಿಸುವುದಲ್ಲ. ನಾವು ಒಂದು ಕುಲ-ಜನಾಂಗ, ಸಂಸ್ಕೃತಿಯ ಗುರುತನ್ನು ರಕ್ಷಿಸುತ್ತಿದ್ದೇವೆ ಎಂದು ಮುಖ್ಯವಾಗಿ ತಿಳಿದುಕೊಳ್ಳಬೇಕು ಎಂದರು.
ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಆಧುನೀಕರಣ ಮತ್ತು ಜಾಗತೀಕರಣವು ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ, ಸಂಸ್ಕೃತಿಯ ಅಧ್ಯಯನ ಮತ್ತು ದಾಖಲೆಗೊಳಿಸುವಿಕೆ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಸಂಸ್ಕೃತಿ ಎಂದರೆ ಕೇವಲ ಆಚರಣೆಗಳು, ಪರಂಪರೆಗಳು ಮತ್ತು ವಿಧಿವಿಧಾನಗಳ ಸಮೂಹವಲ್ಲ. ಅದು ಮಾನವ ಜೀವನದ ಅಸ್ತಿತ್ವದ ಮೂಲಭೂತ ಅಂಶವಾಗಿದೆ. ಇದು ನಮ್ಮ ಗುರುತನ್ನು ರೂಪಿಸುತ್ತದೆ, ನಮ್ಮ ನಡೆ-ನುಡಿಗಳನ್ನು ಮಾರ್ಗದರ್ಶಿಸುತ್ತದೆ ಮತ್ತು ನಮ್ಮ ಮೂಲಗಳಿಗೆ ನಮ್ಮನ್ನು ಸಂಪರ್ಕಿಸುವ ಸೇತುಬಂಧವಾಗಿದೆ ಎಂದರು.
ಪ್ರತಿಯೊಂದು ಸಮುದಾಯ, ಪ್ರದೇಶ ಮತ್ತು ಸಮಾಜವು ತನ್ನದೇ ಆದ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಆ ಪರಂಪರೆಯನ್ನು ಅರ್ಥಮಾಡಿಕೊಳ್ಳಬೇಕು, ಸಂರಕ್ಷಿಸಬೇಕು ಮತ್ತು ಮುಂದಿನ ಪೀಳಿಗೆಗೆ ದಾಟಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆಯನ್ನೂ ನೀಡಿದರು.
ಕುಲಶಾಸ್ತ್ರೀಯ ಅಧ್ಯಯನ ಕೇವಲ ಒಂದು ವಿಧಾನವಲ್ಲ. ಅದು ಜನರನ್ನು ಅವರು ಸ್ವಾಭಾವಿಕವಾಗಿ ವಾಸಿಸುವ ಪರಿಸರದಲ್ಲೇ ವೀಕ್ಷಣೆ ಮಾಡುವುದು, ಅರ್ಥಮಾಡಿಕೊಳ್ಳುವುದು, ಗಮನಿಸುವುದುಮ ಆಲಿಸುವ ಒಂದು ವಿಧಾನವಾಗಿದೆ. ಇದು ಸಹಾನುಭೂತಿ, ಸಹನೆ ಮತ್ತು ವೈವಿಧ್ಯತೆಯ ಗೌರವವನ್ನು ಉತ್ತೇಜಿಸುತ್ತದೆ.
ಕುಲಶಾಸ್ತ್ರೀಯ ಅಧ್ಯಯನದ ಮೂಲಕ, ಜನರು ಹೇಗೆ ಬದುಕುತ್ತಾರೆ, ಅವರ ಆಲೋಚನೆ ಯಾವರೀತಿ ಇದೆ. ಸಂಸ್ಕೃತಿಯೊಂದಿಗೆ ಹೇಗೆ ಸಂವಹನ ಮಾಡುತ್ತಾರೆ ಎಂಬುದರ ಬಗ್ಗೆ ಆಳವಾದ ಅರಿವು ಪಡೆಯಬಹುದು. ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಅನೇಕ ಸಾಂಸ್ಕೃತಿಕ ಆಚರಣೆಗಳು ನಿಧಾನವಾಗಿ ಅಳಿದುಹೋಗುತ್ತಿವೆ. ಅನೇಕ ಭಾಷೆಗಳು ನಾಶವಾಗುತ್ತಿವೆ. ಜನರು ತಮ್ಮ ಪರಂಪರೆಯ ಜ್ಞಾನ ಹಾಗೂ ಆಚರಣೆಗಳನ್ನು ಮರೆತುಬಿಡುತ್ತಿದ್ದಾರೆ. ಆದ್ದರಿಂದ, ಭವಿಷ್ಯದ ದೃಷ್ಟಿಯಿಂದ ಈ ರೀತಿಯ ಕಾರ್ಯಾಗಾರಗಳು ಅತ್ಯಂತ ಅಗತ್ಯವಾಗಿವೆ. ದಾಖಲೀಕರಣ ಮಾಡಲು ಭಾಗವಹಿಸುವವರು ಕೇವಲ ಪ್ರಮಾಣಪತ್ರಕ್ಕಾಗಿ ಇದರಲ್ಲಿ ಪಾಲ್ಗೊಳ್ಳಬಾರದು, ಕೇವಲ ಪದಗಳನ್ನು ಮಾತ್ರ ಕೇಳಬೇಡಿ. ಅದರ ಹಿಂದೆ ಇರುವ ಅರ್ಥವನ್ನು ತಿಳಿಯಬೇಕು. ದಾಖಲೀಕರಣಕ್ಕಾಗಿ ಸಂಪರ್ಕಿಸುವ ಸಮುದಾಯಗಳನ್ನು ಗೌರವಿಸಬೇಕು. ಏಕೆಂದರೆ ಅವರು ಅಧ್ಯಯನದ ವಿಷಯಗಳಲ್ಲ. ಅವರು ಒಂದು ಸಂಸ್ಕೃತಿ ಹಾಗೂ ಕುಲದ ಜ್ಞಾನವನ್ನು ಹೊಂದಿರುವವರು ಎಂದು ಕಿವಿಮಾತನ್ನು ಹೇಳಿದರು.
ಕುಲಶಾಸ್ತ್ರೀಯ ಅಧ್ಯಯನ ಮತ್ತು ದಾಖಲೀಕರಣವು ನೈತಿಕ ಜವಾಬ್ದಾರಿಯನ್ನು ಬಯಸುತ್ತದೆ. ಸಂಶೋಧಕರಾಗಿ ನಿಖರತೆ, ಗೌರವ ಮತ್ತು ತಪ್ಪಾದ ಅರ್ಥೈಸುವಿಕೆಯನ್ನು ತಪ್ಪಿಸುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ನಾವು ಹೆಚ್ಚು - ಹೆಚ್ಚು ಸಂಪರ್ಕವನ್ನು ಹೊಂದಿದ್ದರೂ ಸ್ಥಳೀಯ ಪರಂಪರೆಗಳು , ಮೂಲಜ್ಞಾನವನ್ನು ಕಳೆದುಕೊಳ್ಳುವ ಅಪಾಯವೂ ಇದೆ ಎಂದರು.
ಎಲ್ಲ ಕ್ಷೇತ್ರಗಳಿಗೂ ತಂತ್ರಜ್ಞಾನವೂ ಅತ್ಯಂತ ಮುಖ್ಯವಾಗಿದೆ. ದಾಖಲೀಕರಣ ಮಾಡಲು ಧ್ವನಿ ದಾಖಲಾತಿ, ದೃಶ್ಯ ದಾಖಲೆ, ಡಿಜಿಟಲ್ ಆರ್ಕೈವ್‌ಗಳು ಮತ್ತು ವಿಶ್ಲೇಷಣಾ ಸಾಫ್ಟ್‌ವೇರ್‌ಗಳು ಲಭ್ಯವಿವೆ. ಆದರೆ ತಂತ್ರಜ್ಞಾನವು ಮಾನವೀಯ ಅರಿವಿಗೆ ಪೂರಕವಾಗಿರಬೇಕೇ ಹೊರತು ಅದನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದರು.
ವೇದಿಕೆಯಲ್ಲಿ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ಆಯುಕ್ತ ಡಾ.ಎ.ದೇವರಾಜು, ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ನಿರ್ದೇಶಕ ಅಮಿತಾಬ್ ಪಾಂಡೆ, ಆಂಥ್ರೂಪ್ಸ್ ಇಂಡಿಯಾ ಫೌಂಡೇಷನ್ ಅಧ್ಯಕ್ಷೆ ಪ್ರೊ.ಸುನೀತಾ ರೆಡ್ಡಿ, ಐಜಿಆರ್‌ಎಂಎಸ್‌ನ ಅಶೋಕ್‌ವರ್ಧನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net