ಹುಣಸೂರು ತಾಲೂಕು ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೊಸರಾಮನಹಳ್ಳಿಯಲ್ಲಿರುವ ಏತನೀರಾವರಿ ಯೋಜನೆ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಎಸ್.ವಸಂತಕುಮಾರ್, ಮೇರಿ ರೀಟಾ, ಬಿ.ಪಿರುಕ್ಮಿಣಿ, ಶ್ವೇತಾ ಇತರರಿದ್ದರು.
ಹುಣಸೂರು: ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆ ಮತ್ತು ವಿಲೇವಾರಿಯೊಂದಿಗೆ ಪರಿಸರ ಸಂರಕ್ಷಣೆ ಮಾಡುವುದು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಮುಳ್ಳೂರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ್ ತಿಳಿಸಿದರು.
ತಾಲೂಕಿನ ಗಾವಡಗೆರೆ ಹೋಬಳಿ ಮುಳ್ಳೂರು ಕ್ಲಸ್ಟರ್‌ವ್ಯಾಪ್ತಿಯ ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪರಿಸರ ಸ್ವಚ್ಛತೆ ಕುರಿತಾದ ಮಾಹಿತಿ ಮತ್ತು ದೇವಾಲಯ ಆವರಣ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಗಗಳನ್ನು ಹರಡುವ ಮತ್ತು ಪರಿಸರವನ್ನು ಹಾಳು ಮಾಡುವ ತ್ಯಾಜ್ಯಗಳನ್ನು ನಿಯಂತ್ರಿಸಬೇಕು. ತ್ಯಾಜ್ಯ ವಸ್ತುಗಳನ್ನು ನಿರ್ವಹಣೆ ಮತ್ತು ವಿಲೇವಾರಿ ಮಾಡದಿದ್ದಲ್ಲಿ ಪರಿಸರ ಮಾಲಿನ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳ ತಂಡ ತಾಲೂಕಿನ ಹೊಸರಾಮನಹಳ್ಳಿ ಗ್ರಾಮದ ಸಮೀಪ ಹರಿಯುವ ಲಕ್ಷ್ಮಣತೀರ್ಥ ನದಿದಂಡೆಯ ಮೇಲಿರುವ ಶ್ರೀಕ್ಷೇತ್ರ ವೀರಾಂಜನೇಯ ಸ್ವಾಮಿ ದೇಗುಲದ ಆವರಣದ ಸ್ವಚ್ಛತೆ ಕಾರ್ಯ ನಡಸಿದರು. ಆವರಣದಲ್ಲಿ ಒಣ ಕಸ-ಹಸಿ ಕಸ ತ್ಯಾಜ್ಯ ವಿಲೇವಾರಿ ರೀತಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ಪರಿಣಾಮ, ನದಿ ಮಾಲಿನ್ಯಕ್ಕೆ ಕಾರಣಗಳು ಮುಂತಾದ ವಿಷಯಗಳನ್ನು ತಿಳಿಸಲಾಯಿತು. ಇದೇ ವೇಳೆ ನದಿದಂಡೆಯ ಬಳಿ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಘಟಕಕ್ಕೆ ಭೇಟಿ ನೀಡಿ ಅದರ ಉಪಯೋಗಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೇರಿ ರೀಟಾ, ಸಹ ಶಿಕ್ಷಕರಾದ ಬಿ.ಪಿ.ರುಕ್ಮೀಣಿ, ಶ್ವೇತಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.