ಉಭಯಕುಶಲೋಪರಿ ಬಳಿಕ ಪ್ರಸಕ್ತ ವಿದ್ಯಮಾನಗಳ ಬಗ್ಗೆ, ಶಿಕ್ಷಣ ಕುರಿತು ಚರ್ಚೆ
ಮೈಸೂರು: ನಾಡಿನ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ನಿವಾಸಕ್ಕೆ ಶನಿವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಶೈಕ್ಷಣಿಕ ವಿಚಾರ ಕುರಿತು ಸಮಾಲೋಚನೆ ನಡೆಸಿದರು.
ಕುವೆಂಪುನಗರದಲ್ಲಿರುವ ಅವರ ನಿವಾಸಕ್ಕೆ ಸಚಿವರು ಆಗಮಿಸಿದರು. ಬಾಗಿಲ ಬಳಿ ಬಂದ ಮಹಾದೇವ ಅವರು ಸಚಿವರನ್ನು ಸ್ವಾಗತಿಸಿದರು. ಉಭಯಕುಶಲೋಪರಿ ಬಳಿಕ ಪ್ರಸಕ್ತ ವಿದ್ಯಮಾನಗಳ ಬಗ್ಗೆ, ಶಿಕ್ಷಣ ಕುರಿತು ಚರ್ಚೆ ನಡೆಯಿತು.
ಬಳಿಕ ಸುದ್ದಿಗಾರರೊಮದಿಗೆ ಮಾತನಾಡಿದ ಶಿಕ್ಷಣ ಸಚಿವರು, ಶಿಕ್ಷಣ ಸಚಿವನಾಗಿ ನನಗೆ ದೇವನೂರ ಮಹಾದೇವ ಅವರ ಸಲಹೆ ಬೇಕಿತ್ತು. ಅದಕ್ಕಾಗಿ ಭೇಟಿ ಮಾಡಿ ಚರ್ಚೆ ಮಾಡಿದ್ದು, ಕಲೆ, ನಾಟಕ, ಸಾಹಿತ್ಯದ ಬಗ್ಗೆಯೂ ಮಕ್ಕಳಿಗೆ ತಿಳಿಸುವ ಕುರಿತು ಸಲಹೆ ನೀಡಿದ್ದಾರೆ ಎಂದರು.
ನನ್ನ ವಿರುದ್ಧ ಸಾಕಷ್ಟು ಟೀಕೆಗಳು ಬಂದಿದ್ದವು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂತು. ಇದಕ್ಕೆ ನಾವು ತಂದ ಬದಲಾವಣೆ ಹಾಗೂ ಸಾಕಷ್ಟು ಸುಧಾರಣೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಶಿಕ್ಷಣ ಸುಧಾರಿಸಿದೆ. ಸಮಾನತೆ ಹಾಗೂ ಉತ್ತಮ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ ಎಂದರು.
ಗೋವಿನ ಹಾಡನ್ನು ಕಡ್ಡಾಯವಾಗಿ ನಾಟಕದ ರೂಪದಲ್ಲಿ ಶಾಲೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.